ನವದೆಹಲಿ: ಭಾರತದ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವನೆಯ ಪಿಡುಗಿನ ತೀವ್ರತೆಯು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಯಾಂಪಲ್‌ಗಳು ಒಳಪಟ್ಟ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.
2023ರ ವಾಡಾದ (ವಿಶ್ವ ಉದ್ದೀಪನ ಮದ್ದು ತಡೆ ಘಟಕ) ವರದಿಯ ಪ್ರಕಾರ; 5 ಸಾವಿರ ಅಥವಾ ಅದಕ್ಕಿಂತಲೂ ಹೆಚ್ಚಿನ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ ದೇಶಗಳಲ್ಲಿ ಭಾರತದ ಪಾಲು ಹೆಚ್ಚಿದೆ.
ಡೋಪಿಂಗ್ ಮೇಲೆ ನಿಯಂತ್ರಣ ಹೇರಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ದೇಶದ ಕ್ರೀಡಾ ಸಚಿವಾಲಯವು ಹೇಳಿತ್ತು. ಉದ್ದೀಪನ ಮದ್ದು ತಡೆ ಕಾಯಿದೆಯನ್ನು ಪರಿಷ್ಕರಣೆಗೊಳಿಸಿತ್ತು. ಆದರೂ ಪ್ರಕರಣಗಳ ಸಂಖ್ಯೆ ಇಳಿಮುಖ ಕಾಣುತ್ತಿಲ್ಲ.
2023ರಲ್ಲಿ ಭಾರತವು ಶೇ 3.8ರಷ್ಟು ನಿಷೇಧಿತ ಮದ್ದುಗಳ ಬಳಕೆ ಮಾಡುತ್ತಿದೆ. 5606 ಸ್ಯಾಂಪಲ್‌ಗಳಲ್ಲಿ 214 ಅಡವರ್ಸ್ ಅನಾಲಿಟಿಕಲ್ ಫೈಂಡಿಂಗ್ಸ್ (ಎಎಎಫ್) ದಾಖಲಾಗಿವೆ. ಈ ಮಾದರಿಗಳ ಪೈಕಿ 2748 ಸ್ಯಾಂಪಲ್ ಪರೀಕ್ಷೆಗಳನ್ನು ಸ್ಪರ್ಧೆಗಳು ನಡೆಯುವ ಸಂದರ್ಭದಲ್ಲಿ ನಡೆಸಲಾಗಿತ್ತು. ಅದರಲ್ಲಿ ನಿಷೇಧಿತ ಮದ್ದುಗಳ ಅಂಶಗಳು ಪತ್ತೆಯಾಗಿದು ಚೀನಾದ ಸ್ಯಾಂಪಲ್‌ಗಳಿಗಿಂತಲೂ ಹೆಚ್ಚು. ಚೀನಾ (28,197 ಸ್ಯಾಂಪಲ್‌ಗಳಲ್ಲಿ ಶೇ 0.2 ಎಎಎಫ್), ಅಮೆರಿಕ (6798ರಲ್ಲಿ ಶೇ 1 ಎಎಎಫ್), ಫ್ರಾನ್ಸ್ (11,368 ರಲ್ಲಿ ಶೇ 0.4), ಜರ್ಮನಿ (15,153 ರಲ್ಲಿ ಶೇ 0.4) ಮತ್ತು ರಷ್ಯಾ (10,395 ರಲ್ಲಿ ಶೇ 1 ಎಎಎಫ್) ಯಲ್ಲಿದೆ.
ಭಾರತದಲ್ಲಿ 2022ರಲ್ಲಿ 3865 ಸ್ಯಾಂಪಲ್‌ಗಳಲ್ಲಿ ಶೇ 3.2 ಮಾತ್ರ ಪಾಸಿಟಿವ್ ಆಗಿದ್ದವು. ಈ ದತ್ತಾಂಶಕ್ಕೆ ಹೋಲಿಸಿದರೆ 2023ರಲ್ಲಿ ಪ್ರಕರಗಳು ಹೆಚ್ಚಿವೆ.




