ಇಸ್ಲಮಾಬಾದ್: ಭಾರತದಂತೆಯೇ ಪಾಕಿಸ್ತಾನ ಕೂಡ ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡ ತನ್ನ ಉನ್ನತ ಮಟ್ಟದ ನಿಯೋಗವನ್ನು ಕಳುಹಿಸಲು ನಿರ್ಧರಿಸಿದ್ದು, ಸೋಮವಾರವೇ ನಿಯೋಗಗಳು ವಿವಿಧ ದೇಶಗಳಿಗೆ ತೆರಳಿವೆ.
ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರದ ಕುರಿತು ದೇಶದ ಪರ ವಾದ ಮುಂದಿಡಲು ಭಾರತವು ಹಲವು ನಿಯೋಗಗಳನ್ನು ಕಳುಹಿಸಿದೆ.
ಇದೇ ವಿಚಾರವಾಗಿ ಪಾಕಿಸ್ತಾನವು ತನ್ನ ಪರವಾದ ವಿಚಾರಗಳನ್ನು ಮಂಡಿಸಲು ನಿಯೋಗವನ್ನು ಕಳುಹಿಸಿದೆ. ಶಶಿ ತರೂರ್ ನೇತೃತ್ವದ ನಿಯೋಗವು ಅಮೆರಿಕದಲ್ಲಿ ವಾದ ಮಂಡಿಸಲು ನಿರ್ಧರಿಸಿದ ದಿನದಂದೇ ಪಾಕಿಸ್ತಾನದ ನಿಯೋಗವು ಅಮೆರಿಕದಲ್ಲಿ ಸಭೆ ನಡೆಸಲಿದೆ.
ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಸಾಮಾನ್ಯ ಸಭೆಯ ಮುಖ್ಯಸ್ಥ ಸೇರಿದಂತೆ ವಿಶ್ವ ಸಂಸ್ಥೆಯ 15 ಸದಸ್ಯ ರಾಷ್ಟ್ರಗಳ ಪೈಕಿ 14 ದೇಶಗಳ ರಾಯಭಾರಿಗಳನ್ನು ಪಾಕಿಸ್ತಾನದ ನಿಯೋಗಗಳು ಭೇಟಿ ಮಾಡಲಿವೆ. ಚೀನಾ ಮತ್ತು ರಷ್ಯಾ ದೇಶಗಳಿಗೂ ಪಾಕಿಸ್ತಾನವು ತನ್ನ ನಿಯೋಗ ಕಳುಹಿಸಿದೆ.
'ಭಾರತದ ಆಕ್ರಮಣಶೀಲತೆ ಕುರಿತು ಪಾಕಿಸ್ತಾನದ ವಾದವನ್ನು ಮಂಡಿಸಲು ಮತ್ತು ಸಂಘರ್ಷಕ್ಕಿಂತ ಮಾತುಕತೆಯೇ ಮುಖ್ಯ ಎನ್ನುವುದುನ್ನು ಮನಗಾಣಿಸಲು ನಿಯೋಗಗಳನ್ನು ಕಳುಹಿಸಲಾಗುತ್ತಿದೆ. ಸಿಂಧೂ ನದಿ ನೀರಿನ ಒಪ್ಪಂದವು ತಕ್ಷಣವೇ ಮರುಚಾಲನೆಗೊಳ್ಳಬೇಕು ಎನ್ನುವ ವಿಚಾರವನ್ನೂ ನಿಯೋಗಗಳು ಮಂಡಿಸಲಿವೆ' ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯು ಮಾಹಿತಿ ನೀಡಿದೆ.




