ನವದೆಹಲಿ: ಇಸ್ರೇಲ್ ಜೊತೆಗಿನ ಯುದ್ಧ ಶುಕ್ರವಾರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಇರಾನ್ ತನ್ನ ವಾಯುಪ್ರದೇಶದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಇರಾನ್ ಅಧಿಕಾರಿಗಳ ವಿಶೇಷ ಸೂಚನೆ ಎಂದು ವಿವರಿಸಲಾದ ಈ ನಿರ್ಧಾರವು, ಭಾರತವು ತನ್ನ ನಾಗರಿಕರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ತುರ್ತು ಸ್ಥಳಾಂತರಕ್ಕೆ ವಿಮಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಇರಾನ್‌ನ ಮಹನ್ ಏರ್ ನಿರ್ವಹಿಸುವ ಮೂರು ವಿಶೇಷ ವಿಮಾನಗಳು ಈಶಾನ್ಯ ಇರಾನಿನ ನಗರವಾದ ಮಶಾದ್‌ನಿಂದ ನವದೆಹಲಿಗೆ ಸುಮಾರು 1,000 ಭಾರತೀಯ ಪ್ರಜೆಗಳನ್ನು ಕರೆತರಲಿವೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಮೊದಲ ವಿಮಾನ ಶುಕ್ರವಾರ ರಾತ್ರಿ 11:30 ಕ್ಕೆ ಭಾರತಕ್ಕೆ ಆಗಮಿಸಲಿದೆ. ಉಳಿದ ಎರಡು ವಿಮಾನಗಳು ಶನಿವಾರ ಲ್ಯಾಂಡ್ ಆಗಲಿವೆ. ಒಂದು ನಾಳೆ ಬೆಳಗ್ಗೆ 10:00 ಗಂಟೆಗೆ ಮತ್ತು ಇನ್ನೊಂದು ನಾಳೆ ಸಂಜೆ 4:30ಕ್ಕೆ ದೆಹಲಿಗೆ ಬರಲಿದೆ.
ತಮ್ಮ ದೇಶದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಪ್ರಸ್ತುತ ಸುರಕ್ಷಿತವಾಗಿದ್ದಾರೆ ಎಂದು ಇರಾನ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಗತ್ಯವಿದ್ದರೆ ಸ್ಥಳಾಂತರಕ್ಕೆ ಹೆಚ್ಚಿನ ವಿಮಾನಗಳ ವ್ಯವಸ್ಥೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಆಪರೇಷನ್ ಸಿಂಧು ಕಾರ್ಯಾಚರಣೆ ಅಡಿ ಭಾರತ, ಇರಾನ್ ನಿಂದ ಭಾರತೀಯರನ್ನು ಕರೆತರುತ್ತಿದ್ದು, ಈಗಾಗಲೇ 110 ಭಾರತೀಯ ವಿದ್ಯಾರ್ಥಿಗಳನ್ನು ಇರಾನ್‌ನಿಂದ ಯಶಸ್ವಿಯಾಗಿ ಕರೆತಂದಿದೆ.
ಯುದ್ಧ ಪೀಡಿತ ಇರಾನ್ ನಲ್ಲಿರುವ ವಿದ್ಯಾರ್ಥಿಗಳನ್ನು ಮೊದಲು ಅರ್ಮೇನಿಯಾಗೆ ಸ್ಥಳಾಂತರಿಸಲಾಯಿತು, ನಂತರ ದೋಹಾಗೆ ವಿಮಾನದಲ್ಲಿ ಕರೆದೊಯ್ಯಲಾಯಿತು ಮತ್ತು ಅಂತಿಮವಾಗಿ ಗುರುವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ್ದಾರೆ.




