HEALTH TIPS

ಭೀಕರ ಭೂಕುಸಿತ ಸಂಭವಿಸಿದ್ದ ವಯನಾಡಲ್ಲಿ ಅತ್ಯಾಧುನಿಕ ರಾಡಾರ್ ಸ್ಥಾಪನೆಗೆ ನಿರ್ಧಾರ

ನವದೆಹಲಿ: ಕಳೆದ ವರ್ಷ ಭೀಕರ ಭೂಕುಸಿತ ಸಂಭವಿಸಿ 400 ಜನರು ಸಾವಿಗೀಡಾದ ಕೇರಳದ ವಯನಾಡು ಜಿಲ್ಲೆಯಲ್ಲಿ ಎಕ್ಸ್-ಬ್ಯಾಂಡ್ ರಾಡಾರ್ ಸ್ಥಾಪಿಸಲು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ನಿರ್ಧರಿಸಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಮ್ಮುಖದಲ್ಲಿ ವಯನಾಡಿನ ಪುಲ್ಪಳ್ಳಿಯಲ್ಲಿರುವ ಪಳಸ್ಸಿರಾಜ ಕಾಲೇಜಿನಲ್ಲಿ ಎಕ್ಸ್-ಬ್ಯಾಂಡ್ ರಾಡಾರ್ ಅಳವಡಿಸಲು ಐಎಂಡಿ ಒಪ್ಪಂದಕ್ಕೆ ಸಹಿ ಹಾಕಿದೆ.

100 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಎಕ್ಸ್-ಬ್ಯಾಂಡ್ ರಾಡಾರ್, ವಿಪತ್ತು ಪೀಡಿತ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹವಾಮಾನ ವೀಕ್ಷಣಾ ಮೂಲಸೌಕರ್ಯಕ್ಕೆ ನಿರ್ಣಾಯಕ ಸೇರ್ಪಡೆಯಾಗಿದೆ ಎಂದು ಐಎಂಡಿ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಈ ಅತ್ಯಾಧುನಿಕ ವ್ಯವಸ್ಥೆಯು ಹವಾಮಾನ ಮುನ್ಸೂಚನೆಯ ನಿಖರತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹವಾಮಾನ ವೈಪರೀತ್ಯಗಳ ಕುರಿತಂತೆ ಹೆಚ್ಚು ಸಮಯೋಚಿತ ಮತ್ತು ನಿಖರವಾದ ಮುನ್ಸೂಚನೆ ನೀಡುತ್ತದೆ. ಈ ಪ್ರದೇಶದಲ್ಲಿ ವಿಪತ್ತು ಸಿದ್ಧತೆ ಮತ್ತು ಪ್ರತಿಕ್ರಿಯೆ ಪ್ರಯತ್ನಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ ಎಂದು ಪೋಸ್ಟ್‌ನಲ್ಲಿ ಐಎಂಡಿ ಹೇಳಿದೆ.

ಕಳೆದ ವರ್ಷ ಜುಲೈ 30ರಂದು ವಯನಾಡಿನಲ್ಲಿ ಭೂಕುಸಿತಕ್ಕೆ ಕಾರಣವಾದ ಭಾರಿ ಮಳೆ ಬಗ್ಗೆ ಮುನ್ಸೂಚನೆ ನೀಡುವಲ್ಲಿ ಐಎಂಡಿ ವಿಫಲವಾಗಿತ್ತು ಎಂದು ಕೇರಳ ಸರ್ಕಾರ ಈ ಹಿಂದೆ ಆರೋಪಿಸಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ, ವಯನಾಡಿನಲ್ಲಿ ತೀವ್ರ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಹವಾಮಾನ ಬದಲಾವಣೆಯಿಂದ ಶೇ 10ರಷ್ಟು ಮಳೆ ಹೆಚ್ಚಾಗಿದೆ ಎಂದು ಜಾಗತಿಕ ವಿಜ್ಞಾನಿಗಳ ತಂಡ ಹೇಳಿತ್ತು.

ಎರಡು ತಿಂಗಳ ಮಾನ್ಸೂನ್ ಮಳೆಯಿಂದ ತೋಯ್ದಿದ್ದ ಮಣ್ಣಿನ ಮೇಲೆ ಒಂದೇ ದಿನದಲ್ಲಿ 140 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದ್ದು, ಭೀಕರ ಭೂಕುಸಿತ ಮತ್ತು ಪ್ರವಾಹಕ್ಕೆ ಕಾರಣವಾಗಿದೆ ಎಂದು ಭಾರತ, ಸ್ವೀಡನ್, ಅಮೆರಿಕ ಮತ್ತು ಬ್ರಿಟನ್‌ನ 24 ಸಂಶೋಧಕರ ತಂಡವು ಹೇಳಿತ್ತು.

2021ರಲ್ಲಿ ಸ್ಪ್ರಿಂಗರ್ ಪ್ರಕಟಿಸಿದ್ದ ಅಧ್ಯಯನ ಪ್ರಕಾರ, ಕೇರಳದ ಎಲ್ಲ ಭೂಕುಸಿತ ತಾಣಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿವೆ. ಇಡುಕ್ಕಿ, ಎರ್ನಾಕುಲಂ, ಕೊಟ್ಟಾಯಂ, ವಯನಾಡ್, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ ಎಂದು ಹೇಳಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries