ಕಾಸರಗೋಡು: ತ್ಯಾಗ, ಬಲಿದಾನದ ಸಂಕೇತವಾಗಿ ಬಕ್ರಿದ್ ಹಬ್ಬವನ್ನು ಶನಿವಾರ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಆಚರಿಸಿದರು. ಬೆಳಗ್ಗಿನಿಂದಲೇ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಆರಂಭಗೊಂಡಿತ್ತು. ನಿರಂತರ ಸುರಿಯುತ್ತಿದ್ದ ಮಳೆಗೆ ಕಳೆದ ನಾಲ್ಕು ದಿವಸಗಳಿಂದ ವಿರಾಮ ದೊರೆತಿದ್ದು, ಬಿಸಿಲಿನ ವಾತಾವರಣದಿಂದ ಹಬ್ಬಕ್ಕೆ ಮೆರಗು ಬಂದಿತ್ತು. ಇಬ್ರಹಿಂ ನಬಿ-ಹಾಜಿರಾ ದಂಪತಿ ಪುತ್ರ ಇಸ್ಮಾಯಿಲ್ ಅವರ ತ್ಯಾಗ ಸಂಪನ್ನತೆಯ ಸಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ.
ಕಾಸರಗೋಡು ತಳಂಗರೆ ಮಾಲಿಕ್‍ದೀನಾರ್ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಸೇರಿದಂತೆ ಜಿಲ್ಲೆಯ ನಾನಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು. ಮುಸ್ಲಿಮರು ಹೊಸ ಬಟ್ಟೆ ಧರಿಸಿ, ಮನೆಗಳಿಗೆ ತೆರಳಿ, ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಗಲ್ಫ್ ರಾಷ್ಟ್ರಗಳಲ್ಲಿ ಶುಕ್ರವಾರ ಬಕ್ರೀದ್ ಹಬ್ಬ ಆಚರಿಸಲಾಗಿತ್ತು.





