ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ದಿನ, ವಾಚನಾ ವಾರದ ಔಪಚಾರಿಕ ಉದ್ಘಾಟನೆ ಜೂ. 19 ರಂದು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಲೇಕಳ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯ ಗೋಪಣ್ಣ ಮಾಸ್ತರ್ ನಿರ್ವಹಿಸಿದರು. ಅವರು ಪಿ.ಎನ್.ಪಣಿಕ್ಕರ್ ಗ್ರಂಥಾಲಯಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ವಿವರಿಸಿದರೊಂದಿಗೆ, ಓದು ಮಕ್ಕಳ ನಿತ್ಯ ಹವ್ಯಾಸವಾಗಬೇಕೆಂದರು. ಈ ಸಂದರ್ಭದಲ್ಲಿ ಪ್ರತಿ ಮಗುವಿಗೂ ಗ್ರಂಥಾಲಯದಿಂದ ಒಂದೊಂದು ಪುಸ್ತಕ ನೀಡಲಾಯಿತು.ಬಳಿಕ ಶಾಲಾ ಲೈಬ್ರರಿಗೆ ಗೋಪಣ್ಣ ಮಾಸ್ತರ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಹಿರಿಯ ಶಿಕ್ಷಕ ಗಿರೀಶ್ ವಾಚನಾ ದಿನದ ಪ್ರತಿಜ್ಞೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಮುಖ್ಯೋಪಾಧ್ಯಾಯ ಪದ್ಮನಾಭ ಬರ್ಲಾಯ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಓದಿನ ಮಹತ್ವವನ್ನು ಮಕ್ಕಳಿಗೆ ವಿವರಿಸುತ್ತಾ, ಓದು ನಮ್ಮ ಜೀವನಕ್ಕೆ ಬಹಳ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಅಬ್ದುರಹೀಂ, ಪ್ರಶಾಂತ್ ಕುಮಾರ್, ಯಶಸ್, ಶಿಕ್ಷಕಿಯರಾದ ಹರ್ಷಿತಾ, ಅರ್ಚನಾ, ಶಾಲಾ ಸಿಬ್ಬಂದಿ ಚಿದಾನಂದ ಉಪಸ್ಥಿತರಿದ್ದರು. ಶಾಲಾ ಹಿರಿಯ ಅಧ್ಯಾಪಕ ಗಿರೀಶ್ ಮಾಸ್ತರ್ ಸ್ವಾಗತಿಸಿ, ಶಾಲಾ ಗ್ರಂಥಾಲಯ ನಿರ್ವಾಹಕಿಯೂ, ಶಿಕ್ಷಕಿ ಪ್ರಮೀಳಾ ಟೀಚರ್ ವಂದಿಸಿದರು. ಹಿಂದಿ ಅಧ್ಯಾಪಕ ಸತೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಲ್ಲಾ ವಿದ್ಯಾರ್ಥಿಗಳು ಪುಸ್ತಕ ಪ್ರದರ್ಶನ ವೀಕ್ಷಣೆಯಲ್ಲಿ ಭಾಗಿಯಾದರು.




.jpg)

