ವಿಶ್ವಸಂಸ್ಥೆ: 'ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಗಡಿಯಾಚೆಗಿನ ಭಯೋತ್ಪಾದನೆಯ ವಿಚಾರಗಳು ಚರ್ಚೆಗೆ ಬಾರದಂತೆ ತಡೆಯಲು ಪಾಕಿಸ್ತಾನವು ವಿಶ್ವಸಂಸ್ಥೆಯ ಪ್ರಕ್ರಿಯೆಗಳಿಗೆ ಅಡ್ಡಿಪಡಿಸಿ, ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ' ಎಂದು ಭಾರತವು ವಿಶ್ವಸಂಸ್ಥೆಯಲ್ಲಿ ದೂರಿದೆ.
'ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಪರಿಣಾಮಕಾರಿ ಕಾರ್ಯತಂತ್ರಗಳು' ಎಂಬ ವಿಷಯದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆಯುತ್ತಿದ್ದ ಮುಕ್ತ ಚರ್ಚೆ ವೇಳೆ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪಿ.ಹರೀಶ್, 'ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ ಕಾರ್ಯಸೂಚಿಯನ್ನು ವ್ಯಾಪಕವಾಗಿ ಉಲ್ಲಂಘಿಸುತ್ತಿರುವ ಪಾಕಿಸ್ತಾನದ ಪ್ರತಿನಿಧಿಯ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ' ಎಂದರು.
'ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ' ಕಾರ್ಯಸೂಚಿ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟನಿಯೋ ಗುಟೆರಸ್ ಸಲ್ಲಿಸಿರುವ ವರದಿಯು ಪಾಕಿಸ್ತಾನದಲ್ಲಿನ ಸಶಸ್ತ್ರ ಸಂಘರ್ಷದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಬಲವಾದ ಸಾಕ್ಷ್ಯಗಳನ್ನು ಒದಗಿಸುತ್ತದೆ ಎಂದು ಹೇಳಿದರು.
'ಪಾಕಿಸ್ತಾನದಲ್ಲಿ ಶಾಲೆಗಳ ಮೇಲೆ ವಿಶೇಷವಾಗಿ ಬಾಲಕಿಯರ ಶಾಲೆಗಳ ಮೇಲೆ ನಡೆಯುತ್ತಿರುವ ದಾಳಿಗಳು, ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಗಳು, ಅಫ್ಗಾನಿಸ್ತಾನದ ಗಡಿ ಪ್ರದೇಶಗಳಲ್ಲಿ ನಡೆದ ದಾಳಿಗಳಿಂದ ಅಲ್ಲಿನ ಮಕ್ಕಳು ಅಂಗವಿಕಲರಾಗಿರುವ ಹಲವು ಪ್ರಕರಣಗಳನ್ನು ವರದಿ ವಿಸ್ತೃತವಾಗಿ ಬಹಿರಂಗಪಡಿಸಿದೆ' ಎಂದರು.
'ಇಷ್ಟೆಲ್ಲಾ ನ್ಯೂನತೆಗಳಿರುವ ಪಾಕಿಸ್ತಾನವು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಭಾರತದ ಹೆಸರಿಗೆ ಮಸಿ ಬಳಿಯುವುದನ್ನು ಭಾರತ ಖಂಡಿಸುತ್ತದೆ. ಅಲ್ಲದೇ, ಪಾಕಿಸ್ತಾನ ಮತ್ತು ಪಾಕಿಸ್ತಾನ ಪ್ರೇರಿತ ಉಗ್ರರು ನಡೆಸಿದ ದಾಳಿಗಳು, 26 ಮಂದಿಯನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯನ್ನು ಜಗತ್ತು ಮರೆತಿಲ್ಲ. ಇಂಥ ನಡವಳಿಕೆ ಇದ್ದರೂ ಮತ್ತೊಬ್ಬರಿಗೆ ಬೋಧನೆ ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಿರುವುದು ಬೂಟಾಟಿಕೆಯ ಪರಮಾವಧಿ' ಎಂದೂ ಹರೀಶ್ ಟೀಕಿಸಿದ್ದಾರೆ.




