ಬ್ಯಾಂಕಾಕ್: ಕಾಂಬೋಡಿಯಾದ ಮಾಜಿ ಪ್ರಧಾನಿ ಹುನ್ ಸೇನ್ ಅವರೊಂದಿಗೆ ದೂರವಾಣಿ ಮೂಲಕ ನಡೆಸಿದ ಮಾತುಕತೆಯ ಆಡಿಯೊ ಸೋರಿಕೆಯಾಗಿರುವುದಕ್ಕೆ ಸಂಬಂಧಿಸಿದಂತೆ ಥಾಯ್ಲೆಂಡ್ ಪಿಎಂ ಪೆಟೊಂತಾರ್ನ್ ಶಿನೊವಾರ್ಥ್ ಗುರುವಾರ ಕ್ಷಮೆ ಕೋರಿದ್ದಾರೆ.
ಸೇನ್ ಅವರೊಂದಿಗೆ ತಮ್ಮ ವೈಯಕ್ತಿಕ ಮೊಬೈಲ್ ಮೂಲಕ ಮಾತುಕತೆ ನಡೆಸಿದ್ದಾಗಿ ಹೇಳಿರುವ ಪೆಟೊಂತಾರ್ನ್, ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಸಾರ್ವಜನಿಕವಾಗಿ ಸೋರಿಕೆ ಮಾಡಲಾಗುತ್ತದೆ ಎಂಬುದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಕ್ಷಮೆ ಕೋರಿರುವ ಅವರು, ಈ ವಿಚಾರವಾಗಿ ತಮ್ಮ ಸರ್ಕಾರವು ಸೇನೆಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.
ಪೆಟೊಂತಾರ್ನ್ ಹಾಗೂ ಮಾಜಿ ಪ್ರಧಾನಿ ಹುನ್ ಸೇನ್ ಅವರ ಖಾಸಗಿ ಸಂಭಾಷಣೆಯ ಆಡಿಯೊವನ್ನು ಕಾಂಬೋಡಿಯಾ ಸಾರ್ವಜನಿಕವಾಗಿ ಸೋರಿಕೆ ಮಾಡಿರುವುದನ್ನು ಒಪ್ಪಲಾಗದು ಎಂದು ಥಾಯ್ಲೆಂಡ್ ವಿದೇಶಾಂಗ ಸಚಿವಾಲಯ ಕಟುವಾಗಿ ಹೇಳಿದೆ.
'ಇದು ರಾಜತಾಂತ್ರಿಕ ಶಿಷ್ಟಾಚಾರದ ಉಲ್ಲಂಘನೆ, ನಂಬಿಕೆ ದ್ರೋಹವಾಗಿದೆ. ಇದರಿಂದಾಗಿ, ಎರಡು ನೆರೆ ರಾಷ್ಟ್ರಗಳ ನಡುವಣ ಸಂಬಂಧ ದುರ್ಬಲಗೊಳ್ಳಲಿದೆ' ಎಂದು ಸಚಿವಾಲಯದ ವಕ್ತಾರ ಹೇಳಿದ್ದಾರೆ.




