HEALTH TIPS

ವಿಶ್ವ ಅತಿ ಎತ್ತರದ ರೈಲ್ವೆ ಸೇತುವೆ ಉದ್ಗಾಟನೆ: ರೈಲು ಸಂಪರ್ಕದಲ್ಲಿ ಮೈಲಿಗಲ್ಲು

ಶ್ರೀನಗರ/ಕಟ್ರಾ: ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾ ಬಳಿ ಚೆನಾಬ್‌ ನದಿಗೆ ನಿರ್ಮಿಸಿರುವ, ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.

ಉದ್ಘಾಟನೆ ನಂತರ, ತ್ರಿವರ್ಣ ಧ್ವಜ ಹಿಡಿದು ಮೋದಿ ಅವರು, ಸೇತುವೆ ಮೇಲೆ ನಡೆಯುವ ಮೂಲಕ ಗಮನ ಸೆಳೆದರು.

ಉದ್ಘಾಟನೆಗೂ ಮುನ್ನ, ರೈಲಿನ ಎಂಜಿನ್‌ ಕೋಚ್‌ನಲ್ಲಿ ಪ್ರಯಾಣಿಸಿ, ಕಾರ್ಯಕ್ರಮ ಸ್ಥಳವನ್ನು ಮೋದಿ ತಲುಪಿದರು.

ಚೆನಾಬ್‌ ಸೇತುವೆಯನ್ನು ಉದ್ಘಾಟಿಸಿದ ನಂತರ, ಮೋದಿ ಅವರು, ಅಂಜಿ ನದಿಗೆ ನಿರ್ಮಿಸಿರುವ ದೇಶದ ಮೊದಲ ರೈಲ್ವೆ ತೂಗು ಸೇತುವೆಯನ್ನು ಕೂಡ ಉದ್ಘಾಟಿಸಿದರು. ಇದೇ ವೇಳೆ, ಬಾರಾಮುಲ್ಲಾ-ಕಟ್ರಾ ಸಂಪರ್ಕಿಸುವ ವಂದೇ ಭಾರತ್ ರೈಲು ಸಂಚಾರಕ್ಕೂ ಅವರು ಹಸಿರು ನಿಶಾನೆ ತೋರಿದರು.

ಚೆನಾಬ್‌ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಧ್ವಜ ಹಿಡಿದು ಸೇತುವೆ ಮೇಲೆ ಶುಕ್ರವಾರ ನಡೆದರು

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್‌ ಗವರ್ನರ್ ಮನೋಜ್‌ ಸಿನ್ಹಾ ಉಪಸ್ಥಿತರಿದ್ದರು.

ಯೋಜನೆ: ಚೆನಾಬ್‌ ನದಿಗೆ ನಿರ್ಮಿಸಿರುವ ರೈಲ್ವೆ ಸೇತುವೆಯು, 272 ಕಿ.ಮೀ. ಉದ್ದದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್‌ (ಯುಎಸ್‌ಬಿಆರ್‌ಎಲ್‌) ಯೋಜನೆಯ ಭಾಗವಾಗಿದೆ. ಈ ಯೋಜನೆಯ ಒಟ್ಟು ವೆಚ್ಚ ₹43,780 ಕೋಟಿ.

ಚೆನಾಬ್‌ ಸೇತುವೆಯನ್ನು ₹1,486 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು, ಗಂಟೆಗೆ 260 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯು ಸೃಷ್ಟಿಸುವ ಒತ್ತಡವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಈ ಸೇತುವೆ 120 ವರ್ಷಗಳಷ್ಟು ಬಾಳಿಕೆ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೆನಾಬ್‌ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಧ್ವಜ ಹಿಡಿದು ಸೇತುವೆ ಮೇಲೆ ಶುಕ್ರವಾರ ನಡೆದರು

ಅಂಜಿ ಸೇತುವೆಯು 96 ಕೇಬಲ್‌ಗಳನ್ನು ಒಳಗೊಂಡಿದೆ ಎಂದೂ ಹೇಳಿದ್ದಾರೆ.

ಶಂಕುಸ್ಥಾಪನೆ/ಉದ್ಘಾಟನೆ: ₹40 ಸಾವಿರ ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮೋದಿ ಅವರು, ಕೆಲ ಯೋಜನೆಗಳನ್ನು ಸಹ ಉದ್ಘಾಟಿಸಿದರು.

ರಿಯಾಸಿ ಜಿಲ್ಲೆಯ ತ್ರಿಕೂಟ ಪರ್ವತ ಶ್ರೇಣಿಗಳಲ್ಲಿ ವೈಷ್ಣೋದೇವಿ ಯಾತ್ರಿಗಳಿಗಾಗಿ ಬೇಸ್‌ ಕ್ಯಾಂಪ್‌ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಚೆನಾಬ್‌ ರೈಲ್ವೆ ಸೇತುವೆ ಉದ್ಘಾಟನೆಗೊಂಡ ನಂತರ ಸಂಚಾರ ಆರಂಭಿಸಿದ ವಂದೇ ಭಾರತ್‌ ರೈಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ಮಾತನಾಡಿದರು

ಕಾಂಗ್ರೆಸ್‌ ಬಿಜೆಪಿ ಜಟಾಪಟಿ

ನವದೆಹಲಿ: ಕಾಶ್ಮೀರ ರೈಲು ಸಂಪರ್ಕ ಯೋಜನೆ ಕುರಿತು ಕಾಂಗ್ರೆಸ್‌ ಪಕ್ಷ ಸುಳ್ಳು ಮಾಹಿತಿ ಹಬ್ಬಿಸುತ್ತಿದೆ ಎಂದು ಬಿಜೆಪಿ ಶುಕ್ರವಾರ ಟೀಕಿಸಿದೆ. 'ಪ್ರಧಾನಿ ನೇತೃತ್ವದ ಸರ್ಕಾರ ತಾನು ಘೋಷಿಸಿದ ಯೋಜನೆಗಳನ್ನು ಪೂರ್ಣಗೊಳಿಸಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಕೇವಲ ಘೋಷಣೆಗಳನ್ನು ಮಾಡಿ ಅವುಗಳನ್ನು ಅನುಷ್ಠಾನಕ್ಕೆ ತರುವುದನ್ನು ಮರೆಯುತ್ತಿತ್ತು' ಎಂದು ಟೀಕಿಸಿದೆ.

'ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗವು ಈ ಹಿಂದಿನ ಸರ್ಕಾರ ಆರಂಭಿಸಿದ್ದ ಯೋಜನೆಯ ಮುಂದುವರಿಕೆಯಾಗಿದೆ. ತನ್ನನ್ನು ತಾನೇ ವೈಭವೀಕರಿಸುವ ಬಯಕೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಗತಿಯನ್ನು ಸದಾ ನಿರಾಕರಿಸುತ್ತಾ ಬಂದಿದ್ದಾರೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್‌ ಟೀಕಿಸಿದ್ದರು. 'ಜೈರಾಮ್‌ ರಮೇಶ್‌ ಅವರೇ ಸುಳ್ಳು ಸುದ್ದಿ ಪ್ರಸಾರ ನಿಲ್ಲಿಸಿ. ಚೆನಾಬ್‌ ಸೇತುವೆಯನ್ನು 2002ರಲ್ಲಿ ಎನ್‌ಡಿಎ ಸರ್ಕಾರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿತ್ತು. ಈ ಯೋಜನೆಯ ವೆಚ್ಚವನ್ನು ಶೇ 100ರಷ್ಟು ಕೇಂದ್ರವೇ ಭರಿಸಲಿದೆ' ಎಂದು ಬಿಜೆಪಿ ವಕ್ತಾರ ಪ್ರದೀಪ್‌ ಭಂಡಾರಿ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ. '2004ರ ನಂತರ ಈ ಯೋಜನೆ ಕುರಿತು ಕಾಂಗ್ರೆಸ್‌ ಕ್ರಮ ಕೈಗೊಳ್ಳಲಿಲ್ಲ. ಇತರ ಹಲವು ಯೋಜನೆಗಳಂತೆ ಈ ಯೋಜನೆಗೂ ದೂಳು ಹಿಡಿದಿತ್ತು' ಎಂದು ತಿರುಗೇಟು ನೀಡಿದ್ದಾರೆ.

ಜಮ್ಮು-ಕಾಶ್ಮೀರದ ಕಟ್ರಾ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್‌ ಅಶ್ವಿನಿ ವೈಷ್ಣವ್ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಇದ್ದಾರೆ

ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಮುಂದಿಡುವುದಕ್ಕೆ ವೇದಿಕೆಯನ್ನು ಬಳಸಿಕೊಂಡರು. 'ಇಂದು ವೇದಿಕೆಯಲ್ಲಿ ಉಪಸ್ಥಿತರಿರುವ ಪ್ರಧಾನಿ ಮೋದಿ ಸೇರಿ ನಾಲ್ಕು ಜನರು 2014ರಲ್ಲಿ ಆಗಿನ ನನ್ನ ಸರ್ಕಾರ ಹಮ್ಮಿಕೊಂಡಿದ್ದ ಕೊನೆ ಕಾರ್ಯಕ್ರಮದಲ್ಲಿಯೂ ಉಪಸ್ಥಿತರಿದ್ದೆವು' ಎಂದು ಒಮರ್‌ ಹೇಳಿದರು. 'ಆಗ ನಾನು ಪೂರ್ಣ ಪ್ರಮಾಣದ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದೆ. ಈಗ ಸ್ವಲ್ಪ ಹಿಂಬಡ್ತಿ ಪಡೆದಿರುವೆ. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದೆ ಈಗ ಕೇಂದ್ರಾಡಳಿತವೊಂದರ ಮುಖ್ಯಮಂತ್ರಿಯಾಗಿದ್ದೇನೆ' ಎಂದು ಹಾಸ್ಯಭರಿತ ಮಾತುಗಳಲ್ಲಿ ಹೇಳಿದರು. 'ಇದನ್ನು ಸರಿಪಡಿಸಲು ಬಹಳ ಸಮಯ ಬೇಕಿಲ್ಲ ಎಂಬುದು ನನ್ನ ನಂಬಿಕೆ. ನಿಮ್ಮ ನೆರವಿನಿಂದಾಗಿ ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ಪಡೆಯಲಿದೆ' ಎಂದಾಗ ಜನರು ಭಾರಿ ಕರತಾಡನ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries