ನವದೆಹಲಿ: ಭಾರತದ ಪ್ರತಿಯೊಂದು ಭಾಷೆಯೂ ಇತರ ಭಾಷೆಗಳ ಜೊತೆ ಸಂಪೂರ್ಣವಾಗಿ ಸಂಬಂಧ ಹೊಂದಿದೆ. ಒಂದನ್ನೊಂದು ಬಿಟ್ಟು ಭಾಷೆಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪ್ರತಿಪಾದಿಸಿದರು.
'ಭಾರತೀಯ ಭಾಷಾ ವಿಭಾಗ' ಅನಾವರಣ ಮಾಡಿದ ಬಳಿಕ ಮಾತನಾಡಿದ ಅವರು, 'ದೇಶದ ಎಲ್ಲ ಸ್ಥಳೀಯ ಭಾಷೆಗಳನ್ನು ಬಲಪಡಿಸಿದಾಗ ಮಾತ್ರ ಭಾರತವನ್ನು ಶಾಶ್ವತವಾಗಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯ' ಎಂದು ಹೇಳಿದರು.
'ನಮ್ಮ ಎಲ್ಲ ಭಾಷೆಗಳೂ ನದಿಗಳಂತೆ, ಗಂಗಾ ನದಿಯ ಉಗಮಕ್ಕಾಗಿ ಅವು ಒಂದಾಗುತ್ತವೆ. ಭಾರತದ ಭಾಷೆಗಳು ದೇಶದ ಸಂಸ್ಕೃತಿಯ ಆತ್ಮ ಮತ್ತು ಸಂಸ್ಕೃತಿಯು ಭಾರತದ ಆತ್ಮ' ಎಂದರು.
ಭಾರತೀಯ ಭಾಷಾ ವಿಭಾಗವು ಎಲ್ಲ ಭಾಷೆಗಳಿಗೆ ಬಲಿಷ್ಠವಾದ ಮತ್ತು ಸಂಘಟಿತವಾದ ವೇದಿಕೆಯನ್ನು ಕಲ್ಪಿಸುತ್ತದೆ ಮತ್ತು ಭಾರತದ ಭಾಷಾ ವೈವಿಧ್ಯವನ್ನು ಎತ್ತಿಹಿಡಿಯಲಿದೆ ಎಂದು ಹೇಳಿದರು.
'ಎಲ್ಲ ಭಾಷೆಗಳ ಚೈತನ್ಯ, ಶ್ರೀಮಂತಿಕೆ ಮತ್ತು ಸೂಕ್ಷ್ಮತೆಯನ್ನು ಕುಗ್ಗಿಸದೆಯೇ ತಂತ್ರಜ್ಞಾನವು ಬಳಕೆಯಾಗಬೇಕು. ಇಂಗ್ಲಿಷ್ ಹೇರಿಕೆಯ ವಿರುದ್ಧದ ಯುದ್ಧವನ್ನು ನಾವು ಗೆದ್ದೆ ಗೆಲ್ಲುತ್ತೇವೆ' ಎಂದರು.

