ಕೊಚ್ಚಿ: ಲಕ್ಷದ್ವೀಪದ ಶಾಲಾ ಪಠ್ಯಕ್ರಮದಿಂದ ಮಹಲ್ ಮತ್ತು ಅರೇಬಿಕ್ ಭಾಷೆಗಳನ್ನು ತೆಗೆದುಹಾಕುವ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಏತನ್ಮಧ್ಯೆ, ಲಕ್ಷದ್ವೀಪದಲ್ಲಿ ಜೂನ್ 9 ರಿಂದ ಪ್ರಾರಂಭವಾಗುವ ಶೈಕ್ಷಣಿಕ ವರ್ಷಕ್ಕೆ ಭಾಷಾ ವಿಷಯಗಳ ಪಠ್ಯಕ್ರಮವನ್ನು ಪರಿಷ್ಕರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ ನಂತರ ಸೋಮವಾರ ಶಾಲಾರಂಭ ನಡೆಯಲಿದೆ.
ತ್ರಿಭಾಷಾ ವ್ಯವಸ್ಥೆಯ ಅನುಷ್ಠಾನದ ಭಾಗವಾಗಿ ಶಿಕ್ಷಣ ನಿರ್ದೇಶಕ ಪದ್ಮಾಕರ್ ರಾಮ್ ತ್ರಿಪಾಠಿ ಅವರು ಮೇ 14 ರಂದು ಲಕ್ಷದ್ವೀಪ ಆಡಳಿತಕ್ಕೆ ನೀಡಿದ ಉತ್ತರವನ್ನು ಪ್ರಶ್ನಿಸಿ ಲಕ್ಷದ್ವೀಪ ಮೂಲದವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಲಕ್ಷದ್ವೀಪ ಆಡಳಿತವು ಅರೇಬಿಕ್ ಮತ್ತು ಮಹಲ್ ಭಾಷಾವನ್ನು ಪಠ್ಯಕ್ರಮದಿಂದ ತೆಗೆದುಹಾಕಲು ಮತ್ತು ಇಂಗ್ಲಿಷ್, ಮಲಯಾಳಂ ಮತ್ತು ಹಿಂದಿಯನ್ನು ಪರಿಚಯಿಸಲು ನಿರ್ಧರಿಸಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023 ರ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಪಠ್ಯಕ್ರಮ ಬದಲಾವಣೆಗೆ ಸಂಬಂಧಿಸಿದ ಉತ್ತರವು 70 ವರ್ಷಗಳಿಂದ ಜಾರಿಯಲ್ಲಿರುವ ವ್ಯವಸ್ಥೆಯನ್ನು ನಾಶಮಾಡುವ ಪ್ರಯತ್ನವಾಗಿದೆ ಎಂದು ಅರ್ಜಿದಾರರು ಗಮನಸೆಳೆದಿದ್ದರು.






