ನವದೆಹಲಿ: ಗಾಜಾದಲ್ಲಿ ಇಸ್ರೇಲ್ ನರಮೇಧ ನಿರಂತರವಾಗಿ ಮುಂದುವರೆದಿರುವುದನ್ನು ಖಂಡಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿಯವರ ಮೌನವು ಭಾರತದ ನೈತಿಕ ಮತ್ತು ರಾಜಕೀಯ ಸ್ಥಾನಮಾನವನ್ನು ಕುಗ್ಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈರಾಮ್, ಇರಾನ್- ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಕದನ ವಿರಾಮ ಜಾರಿಯಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಆದರೆ ಇಸ್ರೇಲ್ ನರಮೇಧ ನಿರಂತರವಾಗಿ ನಡೆಯುತ್ತಿರುವ ಗಾಜಾದಲ್ಲಿ ಇನ್ನೂ ಕದನ ವಿರಾಮ ಘೋಷಣೆಯಾಗಿಲ್ಲ ಎಂದು ಜೈರಾಮ್ ಕಳವಳ ವ್ಯಕ್ತಪಡಿಸಿದ್ದಾರೆ.
ಒಂದೂವರೆ ವರ್ಷದಿಂದ ಪ್ಯಾಲೆಸ್ಟೀನಿಯನ್ನರನ್ನು ಕಾಡುತ್ತಿರುವ ಈ ದುರಂತದ ಬಗ್ಗೆ ಪ್ರಧಾನಿ ಮೋದಿಯವರ ಮೌನವು ಕಿವುಡಾಗಿಸುವಂತಿದ್ದು, ಭಾರತದ ನೈತಿಕ ಮತ್ತು ರಾಜಕೀಯ ಸ್ಥಾನಮಾನ ಕುಗ್ಗಿಸಿದೆ ಎಂದು ರಮೇಶ್ ತಿಳಿಸಿದ್ದಾರೆ.
ಗಾಜಾ ಮತ್ತು ಇರಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಭಾರತದ ಮೌನವು ಧ್ವನಿ ಅಡಗಿಸಿಕೊಳ್ಳುವ ಜತೆಗೆ ಮೌಲ್ಯಗಳ ಶರಣಾಗತಿಯೂ ಆಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ 'ದಿ ಹಿಂದೂ' ಪತ್ರಿಕೆಯ ಲೇಖನವೊಂದರಲ್ಲಿ ಉಲ್ಲೇಖಿಸುವ ಮೂಲಕ ಟೀಕಿಸಿದ್ದರು. ಇದರ ಬೆನ್ನಲ್ಲೇ ಜೈರಾಮ್ ರಮೇಶ್ ಮೋದಿ ವಿರುದ್ಧ ಕುಟುಕಿದ್ದಾರೆ.




