ಪುದುಚೆರಿ: 'ವಿಶ್ವದ ಮಹತ್ವಾಕಾಂಕ್ಷಿ ರಾಷ್ಟ್ರವಾದ ಭಾರತವು ಭಾಷೆಗಳ ಆಧಾರದ ಮೇಲೆ ವಿಭಜನೆಯಾಗಲು ಸಾಧ್ಯವಿಲ್ಲ' ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮಂಗಳವಾರ ಪ್ರತಿಪಾದಿಸಿದರು.
ಪುದುಚೆರಿ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, 'ರಾಷ್ಟ್ರೀಯ ಶಿಕ್ಷಣ ನೀತಿ- 2020 ಶಿಕ್ಷಣ ಕ್ಷೇತ್ರದ ಗೇಮ್ ಚೇಂಜರ್ ಆಗಿದ್ದು, ದೇಶವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಉತ್ತೇಜಿಸುತ್ತದೆ.
ಹೀಗಾಗಿ, ಈ ನೀತಿಯನ್ನು ಎಲ್ಲ ರಾಜ್ಯಗಳೂ ಅಳವಡಿಸಿಕೊಳ್ಳಬೇಕು' ಎಂದು ಒತ್ತಾಯಿಸಿದರು.
'ಕಳೆದ ಒಂದು ದಶಕದಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದಾಗಿ ಭಾರತವು ವಿಶ್ವದ ಮಹತ್ವಾಕಾಂಕ್ಷಿ ರಾಷ್ಟ್ರವಾಗಿದೆ. ಭಾಷೆಗಳ ಆಧಾರದ ಮೇಲೆ ದೇಶವನ್ನು ಹೇಗೆತಾನೆ ವಿಭಜಿಸಲಾದೀತು' ಎಂದು ಪ್ರಶ್ನಿಸಿದರು.
ಭಾಷೆಗಳ ವಿಷಯದಲ್ಲಿ ಜಗತ್ತಿನ ಯಾವುದೇ ದೇಶವೂ ಭಾರತದಷ್ಟು ಶ್ರೀಮಂತವಾಗಿಲ್ಲ. ಸಂಸ್ಕೃತವು ಜಾಗತಿಕ ಮಹತ್ವ ಹೊಂದಿದ್ದು, ತಮಿಳು, ಕನ್ನಡ, ತೆಲುಗು, ಮಲಯಾಳಂ, ಒಡಿಯಾ, ಮರಾಠಿ, ಪಾಲಿ, ಪ್ರಾಕೃತ, ಬೆಂಗಾಳಿ ಹಾಗೂ ಅಸ್ಸಾಮಿ ಭಾಷೆಗಳು ಶಾಸ್ತ್ರೀಯ ಭಾಷೆಗಳಾಗಿವೆ.
'ಸಂಸತ್ತಿನಲ್ಲಿ 22 ಭಾಷೆಗಳಲ್ಲಿ ಚರ್ಚಿಸಲು ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿದೆ. ಇದು ನಮ್ಮ ಭಾಷೆಗಳ ಒಳಗೊಳ್ಳುವಿಕೆಯನ್ನು ತೋರಿಸುತ್ತದೆ' ಎಂದು ಹೇಳಿದರು.




