ಇಂಫಾಲ: ಮಣಿಪುರದ ಚುರಚಂದ್‌ಪುರದಲ್ಲಿ ಭದ್ರತಾ ಪಡೆ ಮತ್ತು ಶಸ್ತ್ರಸಜ್ಜಿತ ಗುಂಪಿನ ನಡುವಿನ ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಮಹಿಳೆ ಮೃತಪಟ್ಟಿದ್ದಾರೆ.
ಬಿಷ್ಣುಪುರದ ಕಣಿವೆ ಜಿಲ್ಲೆಯ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮೈತೆಯಿ ರೈತನೊಬ್ಬ ಗುಂಡೇಟಿನಿಂದ ಗಾಯಗೊಂಡ ನಂತರ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.
ಕಾರ್ಯಾಚರಣೆಯ ಸಮಯದಲ್ಲಿ ಭದ್ರತಾ ಪಡೆಗಳ ಮೇಲೆ ಅಪರಿಚಿತ ಶಸ್ತ್ರಸಜ್ಜಿತ ಗುಂಪು ಗುಂಡಿನ ದಾಳಿ ನಡೆಸಿತ್ತು, ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಮಹಿಳೆಗೆ ಗುಂಡು ತಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಲಾಂಗ್‌ಚಿಂಗ್‌ಮನ್ಬಿ ಎನ್ನುವ ಗ್ರಾಮದ ಮುಖ್ಯಸ್ಥನ ಪತ್ನಿ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಆರೋಪಿಗಳನ್ನು ಸೆರೆ ಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಶಾಂತಿಯನ್ನು ಕಾಪಾಡಬೇಕು, ಸುಳ್ಳು ಸುದ್ದಿಗಳ ಪ್ರಸಾರವನ್ನು ತಡೆಯಬೇಕು ಎಂದು ಪೊಲೀಸರು ಒತ್ತಾಯಿಸಿದ್ದಾರೆ.




