ಅಹಮದಾಬಾದ್: ಏರ್ ಇಂಡಿಯಾ ವಿಮಾನ AI-171 ಪತನಗೊಂಡ ಬೆನ್ನಲ್ಲೇ, ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ಷೇರುಗಳು ಯುಎಸ್ ಷೇರು ಮಾರುಕಟ್ಟೆ ವಹಿವಾಟು ಆರಂಭಕ್ಕೂ ಮುನ್ನವೇ ಗುರುವಾರ ಶೇ 8ರಷ್ಟು ನಷ್ಟ ಅನುಭವಿಸಿವೆ.
ಬೋಯಿಂಗ್ ಕಂಪನಿಗೆ ಸೇರಿದ 787 ಡ್ರೀಮ್‌ಲೈನರ್ ವಿಮಾನವಾಗಿದ್ದ AI-171 ಇಂದು ಮಧ್ಯಾಹ್ನ, ಅಹಮದಾಬಾದ್‌ನ ಮೇಘಾನಿನಗರ್ ಪ್ರದೇಶದಲ್ಲಿ ಪತನಗೊಂಡಿದೆ.
ಅತ್ಯಾಧುನಿಕ ಪ್ರಯಾಣಿಕ ವಿಮಾನ ಎನಿಸಿದ್ದ ಈ ವಿಮಾನವು, ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಪ್ರಯಾಣ ಆರಂಭಿಸಿತ್ತು. ಆದರೆ, ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದೆ.
ವಿಮಾನ ಪತನಕ್ಕೆ ಕಾರಣವೇನು, ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಸದ್ಯಕ್ಕೆ ಸ್ಷಷ್ಟವಾಗಿಲ್ಲ.
ಆದರೆ, ಈ ದುರಂತದ ಸುದ್ದಿ ಪ್ರಕಟವಾಗುತ್ತಿದ್ದಂತೆ ಬೋಯಿಂಗ್ ಕಂಪನಿ ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದೆ. ಯುಎಸ್ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಕ್ಕೂ ಮುನ್ನವೇ ಬೋಯಿಂಗ್ ಷೇರುಗಳು ಶೇ 8ರಷ್ಟು ಕುಸಿತ ಕಂಡಿವೆ ಎಂದು ವರದಿಯಾಗಿದೆ.
'ವಿಮಾನ ಪತನದ ಬೆನ್ನಲ್ಲೇ ಷೇರುಗಳ ಕುಸಿತ ಕಂಡಿವೆ. ಇತ್ತೀಚಿನ ವರ್ಷಗಳಲ್ಲಿ ಬೋಯಿಂಗ್ ಕಂಪನಿ ವಿಮಾನಗಳಲ್ಲಿ ಪದೇ ಪದೇ ಸಮಸ್ಯೆ ಸೃಷ್ಟಿಯಾಗುತ್ತಿದೆ' ಎಂದು ಐಜಿ ಗ್ರೂಪ್ ವಿಶ್ಲೇಷಕ ಕ್ರಿಸ್ ಬ್ಯೂಚಾಂಪ್ ಹೇಳಿದ್ದಾರೆ.




