HEALTH TIPS

ಮಗುವಿನಂತೆ ಕಲಿಯುತ್ತಿದ್ದೇನೆ: ಗಗನಯಾನಿ ಶುಭಾಂಶು ಶುಕ್ಲಾ

ನವದೆಹಲಿ: 'ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಲ್ಲಿ ಬದುಕುವುದನ್ನು ಮಗುವಿನಂತೆ ಕಲಿಯುತ್ತಿದ್ದೇನೆ ಮತ್ತು ಅನುಭವಗಳನ್ನು ಆನಂದಿಸುತ್ತಿದ್ದೇನೆ' ಎಂದು ಗಗನಯಾನಿ ಶುಭಾಂಶು ಶುಕ್ಲಾ ಹೇಳಿದ್ದಾರೆ.

'ಡ್ರ್ಯಾಗನ್‌' ಬಾಹ್ಯಾಕಾಶ ನೌಕೆಯಿಂದ ವಿಡಿಯೊಲಿಂಕ್‌ ಮೂಲಕ ತಮ್ಮ ಅನುಭವ ಹಂಚಿಕೊಂಡಿರುವ ಅವರು, 'ನೌಕೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್‌) ಜತೆಗೆ ಜೋಡಿಸಲು (ಡಾಕಿಂಗ್‌) ಭೂಮಿಯನ್ನು ಸುತ್ತುತ್ತಿದೆ.

ಈ ವೇಳೆ ನಿರ್ವಾತದಲ್ಲಿ ತೇಲುವುದು ನಿಜವಾಗಿಯೂ ಅದ್ಭುತವಾದ ಅನುಭವ' ಎಂದು ತಿಳಿಸಿದ್ದಾರೆ.

ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳಿದ್ದ 'ಡ್ರ್ಯಾಗನ್‌' ಬಾಹ್ಯಾಕಾಶ ಕೋಶವನ್ನು ಹೊತ್ತ ಸ್ಪೇಸ್‌ಎಕ್ಸ್‌ನ 'ಫಾಲ್ಕನ್‌-9' ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ನಭಕ್ಕೆ ಚಿಮ್ಮಿತ್ತು. ಈ ಗಗನಯಾನಿಗಳು 14 ದಿನಗಳವರೆಗೆ ಐಎಸ್‌ಎಸ್‌ನಲ್ಲಿರುವ ವಿವಿಧ ಅಧ್ಯಯನ, ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ.

'ವಾವ್‌, ಇದು ಅದ್ಭುತ ಸವಾರಿಯಾಗಿತ್ತು. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ, ಬುಧವಾರ 'ಗ್ರೇಸ್‌' ಕ್ಯಾಪ್ಸುಲ್‌ನಲ್ಲಿ ಕುಳಿತಿದ್ದಾಗ ಸುಮ್ಮನೆ ಹೋಗೋಣ ಎಂಬ ಏಕೈಕ ಆಲೋಚನೆಯಷ್ಟೇ ಬಂದಿದ್ದು. 30 ದಿನಗಳ ಕ್ವಾರಂಟೈನ್‌ ಅವಧಿ ಬಳಿಕ ನಾನು ಹೋಗಲು ಬಯಸಿದ್ದೆ' ಎಂದು ಹೇಳಿದ್ದಾರೆ. 'ಡ್ರ್ಯಾಗನ್‌' ಬಾಹ್ಯಾಕಾಶ ಕೋಶಕ್ಕೆ ಗಗನಯಾನಿಗಳು 'ಗ್ರೇಸ್‌' ಎಂದು ಹೆಸರಿಟ್ಟಿದ್ದಾರೆ.

'ನಿರ್ವಾತದಲ್ಲಿ ತೇಲಿದೆವು':

ಶುಕ್ಲಾ ಅವರು ಗುರುತ್ವಾಕರ್ಷಣೆ ಬಲವನ್ನು ಎದುರಿಸಿದ ಅನುಭವವನ್ನೂ ಈ ವೇಳೆ ಹಂಚಿಕೊಂಡಿದ್ದಾರೆ. 'ಸವಾರಿ ಆರಂಭವಾಗುತ್ತಿದ್ದಂತೆ ಸೀಟನ್ನು ಹಿಂದಕ್ಕೆ ತಳ್ಳಿದಂತೆ ಭಾಸವಾಯಿತು. ಅದು ಅದ್ಭುತ ಸವಾರಿ. ಆ ನಂತರ ಇದ್ದಕ್ಕಿದ್ದಂತೆ ‌ಎಲ್ಲವೂ ಮೌನವಾಯಿತು. ತೇಲುತ್ತಿದ್ದೇವೆ ಅನಿಸಿತು. ಸೀಟಿನೊಂದಿಗೆ ಜೋಡಣೆಯಾಗಿದ್ದ ಬಕಲ್‌ ಅನ್ನು ಬಿಚ್ಚಿ, ನಿರ್ವಾತದಲ್ಲಿ ತೇಲಿದೆವು' ಎಂದು ಅವರು ಆ ಕ್ಷಣಗಳನ್ನು ವಿವರಿಸಿದ್ದಾರೆ.

ನಿರ್ವಾತ ಪ್ರವೇಶಿಸಿದಾಗ ಆರಂಭದ ಕೆಲ ಕ್ಷಣ ಅಷ್ಟೇನು ಅದ್ಭುತ ಅನಿಸಲಿಲ್ಲ. ಆದರೆ ಶೀಘ್ರದಲ್ಲಿಯೇ ಅದು ಅತ್ಯದ್ಭುತ ಅನಿಸತೊಡಗಿತು ಎಂದು ಅವರು ಹೇಳಿದ್ದಾರೆ.

ಮಗುವಿನಂತೆ ಕಲಿಯುತ್ತಿದ್ದೇನೆ:

'ನಾನು ನಿರ್ವಾತ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿದ್ದೇನೆ. ಇಲ್ಲಿನ ದೃಶ್ಯಗಳು ಮತ್ತು ಅನುಭವಗಳನ್ನು ಆನಂದಿಸುತ್ತಿದ್ದೇನೆ. ಅಲ್ಲದೆ ಮಗುವಿನಂತೆ ಎಲ್ಲವನ್ನೂ ಕಲಿಯುತ್ತಿದ್ದೇನೆ. ಈ ವಾತಾವರಣದಲ್ಲಿ ಹೆಜ್ಜೆಯಿಡುವುದು, ನಡೆಯುವುದು, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದು, ತಿನ್ನುವುದನ್ನು ಕಲಿಯುತ್ತಿದ್ದೇನೆ. ಇದು ತುಂಬ ರೋಮಾಂಚನಕಾರಿ ಅನುಭವವಾಗಿದೆ' ಎಂದು ಅವರು ತಿಳಿಸಿದ್ದಾರೆ.

'ಇದು ಹೊಸ ಪರಿಸರ ಮತ್ತು ಹೊಸ ಸವಾಲು. ಸಹ ಗಗನಯಾತ್ರಿಗಳ ಜತೆಗೆ ಇಲ್ಲಿನ ಅನುಭವವನ್ನು ಆನಂದಿಸುತ್ತಿದ್ದೇನೆ. ತಪ್ಪುಗಳನ್ನು ಮಾಡುವುದು ಒಳ್ಳೆಯದು, ಅದನ್ನೇ ಬೇರೆಯವರೂ ಮಾಡಿದಾಗ ನೋಡುವುದು ಇನ್ನೂ ಮಜವಾಗಿರುತ್ತದೆ. ಈ ಮೋಜಿನ ಸಮಯವನ್ನು ನಾವು ಆನಂದಿಸುತ್ತಿದ್ದೇವೆ' ಎಂದೂ ಅವರು ವಿವರಿಸಿದ್ದಾರೆ.

ಶೂನ್ಯ ಗುರುತ್ವದ ಸೂಚಕ 'ಜಾಯ್‌'

ನವದೆಹಲಿ: ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರು 'ಗ್ರೇಸ್‌'ನಲ್ಲಿದ್ದ ಹಂಸ ಪಕ್ಷಿ ಹೋಲುವ ಆಟಿಕೆ 'ಜಾಯ್‌' ಅನ್ನು ಪರಿಚಯಿಸಿದರು. ಶೂನ್ಯ ಗುರುತ್ವಾಕರ್ಷಣೆಯ ಸೂಚಕವಾಗಿ ಇದು ಕಾರ್ಯ ನಿರ್ವಹಿಸುತ್ತಿದೆ. ಅದು 'ಆಕ್ಸಿಯಂ-4' ಯೋಜನೆಯ 'ಐದನೇ ಸಿಬ್ಬಂದಿ ಸದಸ್ಯ' ಆಗಿದೆ ಎಂದು ಹೇಳಿದರು.

ಶುಕ್ಲಾ ಅವರ ಮಗ ಕಿಯಾಶ್‌ಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿಯಿದೆ. ಈ ಕಾರಣಕ್ಕಾಗಿ ಹಂಸ ಪಕ್ಷಿಯ ಆಟಿಕೆಯನ್ನು ಶೂನ್ಯ ಗುರುತ್ವಾಕರ್ಷಣೆಯ ಸೂಚಕವಾಗಿ ಆಯ್ಕೆ ಮಾಡಲಾಗಿದೆ.

'ನಾವು ಇಲ್ಲಿರುವುದು ನಾಲ್ವರಷ್ಟೇ ಅಲ್ಲ. ನಮ್ಮ ಜತೆಗೆ ಜಾಯ್‌ ಕೂಡ ಇದೆ. ಅದೂ ನಮ್ಮೊಂದಿಗೆ ತೇಲುತ್ತದೆ. ಅದು ಕೋಶದಾದ್ಯಂತ ತೇಲಾಡುತ್ತಿರುತ್ತದೆ. ಕೆಲವೊಮ್ಮೆ ಅದನ್ನು ಹುಡುಕಬೇಕಾದ ಪ್ರಸಂಗವೂ ಬಂದಿದೆ' ಎಂದು ಪೋಲೆಂಡ್‌ನ ಸ್ವವೋಶ್ ಓಜ್ನೈನ್‌ಸ್ಕಿ ವೀಶ್ನೀವುಫ್‌ಸ್ಕಿ ಹೇಳಿದ್ದಾರೆ.

ಮೂರು ದೇಶಗಳ ಸಂಸ್ಕೃತಿಯ ಸಂಕೇತ:

ಹಂಸ ಪಕ್ಷಿಯನ್ನು ಭಾರತದಲ್ಲಿ ಬುದ್ಧಿವಂತಿಕೆ ಮತ್ತು ಪರಿಶುದ್ಧತೆಯ ಸಂಕೇತಿಸುತ್ತದೆ. ಜತೆಗೆ ಅದು ಸತ್ಯದ ಅನ್ವೇಷಣೆಯನ್ನೂ ಪ್ರತಿನಿಧಿಸುತ್ತದೆ. ಅಲ್ಲದೆ ಇದನ್ನು ಸರಸ್ವತಿ ದೇವಿಯ ವಾಹನ ಎಂದೂ ಭಾವಿಸಲಾಗಿದೆ. ಪೋಲೆಂಡ್‌ನಲ್ಲಿ ಹಂಸವು ಶುದ್ಧತೆ ನಿಷ್ಠೆಯನ್ನು ಪ್ರತಿನಿಧಿಸಿದರೆ ಹಂಗರಿಯಲ್ಲಿ ಇದು ನಿಷ್ಠೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಶೂನ್ಯ ಗುರುತ್ವಾಕರ್ಷಣೆಯ ಸೂಚಕವಾಗಿ ಹಂಸವನ್ನು ಆಯ್ಕೆ ಮಾಡುವ ಮೂಲಕ 'ಆಕ್ಸಿಯಂ-4'ನ ಗಗನಯಾನಿಗಳು ತಮ್ಮ ದೇಶಗಳ ಸಂಸ್ಕೃತಿ ವೈವಿಧ್ಯತೆಯನ್ನು ಪ್ರತಿಬಿಂಬಿಸಿದ್ದಾರೆ ಎಂದು 'ಆಕ್ಸಿಯಂ ಸ್ಪೇಸ್‌' ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries