ಮುಂಬೈ: ವಾಣಿಜ್ಯ ನಗರಿ ಮುಂಬೈನ ಕೆಲವು ಭಾಗಗಳಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಇಂದೂ ಸಹ ನಗರ ಮತ್ತು ಸಬ್‌ಅರ್ಬನ್ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯು ಮುಂಬೈಗೆ 'ಯೆಲ್ಲೊ' ಅಲರ್ಟ್, ನೆರೆಯ ಠಾಣೆ, ರಾಯಗಢ ಮತ್ತು ಪಾಲ್ಘರ್ ಜಿಲ್ಲೆಗಳಿಗೆ 'ಆರೆಂಜ್' ಅಲರ್ಟ್ ಘೋಷಿಸಿದೆ.
ಮುಂಬೈನ ಹಲವು ಭಾಗಗಳಲ್ಲಿ ರಾತ್ರಿ ಇಡೀ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗಿದೆ. ಬೆಳಗ್ಗೆ ವೇಳೆಗೆ ಮಳೆ ಕಡಿಮೆಯಾಗಿದೆ. ಯಾವುದೇ ಅವಘಡಗಳ ಬಗ್ಗೆ ವರದಿಯಾಗಿಲ್ಲ.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಮುಂಬೈ ನಗರದಲ್ಲಿ 31 ಮಿಮೀ ಮಳೆಯಾಗಿದ್ದರೆ, ಪೂರ್ವ ಮತ್ತು ಪಶ್ಚಿಮ ಸಬ್‌ಅರ್ಬನ್ ಪ್ರದೇಶಗಳಲ್ಲಿ ಕ್ರಮವಾಗಿ 21 ಮಿಮೀ ಮತ್ತು 20 ಮಿಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ 2.52ರ ವೇಳೆಗೆ ಸಮುದ್ರದಲ್ಲಿ 4.27 ಮೀಟರ್ ಎತ್ತರದ ಅಲೆಗಳು ಮತ್ತು ರಾತ್ರಿ 8.55ರ ವೇಳೆಗೆ 1.91 ಮೀಟರ್ ಎತ್ತರದ ಅಲೆಗಳನ್ನು ನಿರೀಕ್ಷಿಸಲಾಗಿದೆ.




