ನವದೆಹಲಿ: 'ಇಂಗ್ಲಿಷ್, ಸಬಲೀಕರಿಸುವ ಭಾಷೆ, ಅವಮಾನಕರ ಭಾಷೆಯಲ್ಲ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಶುಕ್ರವಾರ) ಹೇಳಿದ್ದಾರೆ.
'ಇಂಗ್ಲಿಷ್ ಮಾತನಾಡುವವರು ನಾಚಿಕೆಪಟ್ಟುಕೊಳ್ಳುವ ಕಾಲ ದೂರವಿಲ್ಲ' ಎಂದು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, 'ಇಂಗ್ಲಿಷ್ ಭಾಷೆ ಅಣೆಕಟ್ಟು ಅಲ್ಲ, ಬದಲಿಗೆ ಅದು ಸೇತುವೆಯಾಗಿದೆ. ಇಂಗ್ಲಿಷ್ ಕಲಿಯುವುದು ನಾಚಿಕೆಗೇಡಿನ ವಿಷಯವಲ್ಲ, ಬದಲಿಗೆ ಅದು ನಮ್ಮನ್ನು ಸಬಲೀಕರಿಸುತ್ತದೆ. ಇಂಗ್ಲಿಷ್ ಭಾಷೆ ಸರಪಳಿಯಲ್ಲ, ಬದಲಿಗೆ ಅದು ಸರಪಳಿಯನ್ನು ಭೇದಿಸುವ ಸಾಧನವಾಗಿದೆ' ಎಂದು ಹೇಳಿದ್ದಾರೆ.
'ಬಡ ಮಕ್ಕಳು ಇಂಗ್ಲಿಷ್ ಕಲಿಯುವುದನ್ನು ಆರ್‌ಎಸ್‌ಎಸ್-ಬಿಜೆಪಿ ಬಯಸುವುದಿಲ್ಲ. ಏಕೆಂದರೆ ಬಡವರು ಇಂಗ್ಲಿಷ್ ಕಲಿತರೆ ಅವರು ಪ್ರಶ್ನೆ ಎತ್ತುತ್ತಾರೆ, ಸಮಾನತೆ ಪಡೆಯುತ್ತಾರೆ, ಪ್ರಗತಿ ಸಾಧಿಸುತ್ತಾರೆ. ಆದರೆ ಅದನ್ನು ಬಿಜೆಪಿ-ಆರ್‌ಎಸ್‌ಎಸ್ ಬಯಸುವುದಿಲ್ಲ' ಎಂದು ಅವರು ಉಲ್ಲೇಖಿಸಿದ್ದಾರೆ.
'ಆಧುನಿಕ ಜಗತ್ತಿನಲ್ಲಿ ಮಾತೃಭಾಷೆಯಷ್ಟೇ ಇಂಗ್ಲಿಷ್ ಕೂಡ ಮುಖ್ಯವಾಗಿದೆ. ಏಕೆಂದರೆ ಅದು ಉದ್ಯೋಗ ಒದಗಿಸುವುದರ ಜತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ' ಎಂದು ಅವರು ಹೇಳಿದ್ದಾರೆ.
'ಭಾರತದ ಪ್ರತಿ ಭಾಷೆಯಲ್ಲೂ ಆತ್ಮ, ಸಂಸ್ಕೃತಿ ಹಾಗೂ ಜ್ಞಾನವಿದೆ. ನಾವದನ್ನು ಪೋಷಿಸಬೇಕು. ಅದೇ ಹೊತ್ತಿಗೆ ಪ್ರತಿ ಮಗುವಿಗೂ ಇಂಗ್ಲಿಷ್ ಕಲಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿ ಮಗುವಿಗೂ ಸಮಾನ ಅವಕಾಶ ಕಲ್ಪಿಸಲು ಇದು ಪ್ರಮುಖ ದಾರಿಯಾಗಿದೆ' ಎಂದು ಅವರು ತಿಳಿಸಿದ್ದಾರೆ.




