ನವದೆಹಲಿ: ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ದೆಹಲಿ, ಹರಿಯಾಣ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ರೂಮಿ ವೊಹ್ರಾ(30) ಇಂದು ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.
ಮಂಗಳವಾರ ಬೆಳಿಗ್ಗೆ ದೆಹಲಿ-ಹರಿಯಾಣ ಗಡಿಯ ಯಮುನಾನಗರ್ ಬಳಿ ಎನ್‌ಕೌಂಟರ್ ನಡೆದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಗ್ಯಾಂಗ್‌ಸ್ಟರ್ ಕಾಲಾ ರಾಣಾನ ಸಹವರ್ತಿಯಾಗಿದ್ದ ರೂಮಿ ವೊಹ್ರಾ ಯಮುನಾನಗರ್, ಕುರುಕ್ಷೇತ್ರ, ದೆಹಲಿ ಸೇರಿದಂತೆ ಹಲವು ಕಡೆ ಆರು ಕೊಲೆ ಮಾಡಿದ ಪ್ರಕರಣಗಳನ್ನು ಎದುರಿಸುತ್ತಿದ್ದ. ಅಲ್ಲದೇ ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳೂ ದಾಖಲಾಗಿದ್ದವು ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ ಕಮಿಷನರ್ ಪ್ರಮೋದ್ ಸಿಂಗ್ ಕುಶ್ವಾ ತಿಳಿಸಿದ್ದಾರೆ.
ರೂಮಿ ವೊಹ್ರಾ ಯಮುನಾಗರ ಬಳಿ ಇದ್ದಾನೆ ಎಂಬ ಸುಳಿವು ಆಧರಿಸಿ ಆತನ ಬಂಧನಕ್ಕೆ ಹರಿಯಾಣ ಪೊಲೀಸ್ ಹಾಗೂ ದೆಹಲಿ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದವು. ಈ ವೇಳೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ನೋಡಿದ್ದ. ಪ್ರತಿ ದಾಳಿಯಲ್ಲಿ ಆತ ಹತ್ಯೆಯಾಗಿದ್ದಾನೆ ಎಂದು ಅವರು ವಿವರಿಸಿದ್ದಾರೆ.
ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ರೂಮಿ ವೊಹ್ರಾನ ಬಗ್ಗೆ ಸುಳಿವು ನೀಡಿದವರಿಗೆ ಪೊಲೀಸರು ಐದು ಲಕ್ಷ ನಗದು ಬಹುಮಾನ ಈ ಮೊದಲು ಘೋಷಿಸಿದ್ದರು.




