ಚೆಸ್ಟರ್: "ಗಾಝಾದಲ್ಲಿ ನಡೆಯುತ್ತಿರುವುದನ್ನು ನೋಡಿ ನಮಗೆ ತುಂಬಾ ನೋವಾಗಿದೆ. ಇದರಿಂದ ನನ್ನ ಇಡೀ ದೇಹ ಘಾಸಿಗೊಳಗಾಗಿದೆ. ಆದರೆ, ಇದು ಸೈದ್ಧಾಂತಿಕತೆಗೆ ಸಂಬಂಧಿಸಿದ್ದಲ್ಲ; ಇದು ನಾನು ಸರಿಯೊ ಅಥವಾ ತಪ್ಪೊ ಎಂದೂ ಅಲ್ಲ. ಬದಲಿಗೆ, ಇದು ಜೀವನ ಪ್ರೀತಿಯ ಕುರಿತದ್ದು; ನಿಮ್ಮ ನೆರೆಯವರ ಬಗೆಗಿನ ಕಾಳಜಿಯ ಕುರಿತದ್ದು.
ಕೇವಲ ನಾಲ್ಕು ವರ್ಷದ ಬಾಲಕರು ಹಾಗೂ ಬಾಲಕಿಯರು ಬಾಂಬ್ ದಾಳಿಗೆ ಬಲಿಯಾಗುತ್ತಿರುವುದು ಹಾಗೂ ಆಸ್ಪತ್ರೆಯೊಂದು ಆಸ್ಪತ್ರೆಯಾಗಿ ಉಳಿದಿರದೆ ಇರುವುದರಿಂದ, ಅವರನ್ನು ಆಸ್ಪತ್ರೆಯಲ್ಲೇ ಹತ್ಯೆಗೈಯ್ಯಲಾಗುತ್ತಿರುವುದರಿಂದ ನಾವು ಯೋಚಿಸಬೇಕಿದೆ" ಎಂದು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನವಾದ ಮ್ಯಾಂಚೆಸ್ಟರ್ ಸಿಟಿ ಮ್ಯಾನೇಜರ್ ಪೆಪ್ ಗಾರ್ಡಿಯೋಲಾ ಗಾಝಾದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಪೆಪ್ ಗಾರ್ಡಿಯೋಲಾ ತಮ್ಮ ಅಧಿಕಾರ ಹಾಗೂ ಅಧಿಕಾರ ವ್ಯಾಪ್ತಿಯಿಂದ ಹೊರಗೆ ಮ್ಯಾಂಚೆಸ್ಟರ್ ನಗರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ಈ ಸಮಾರಂಭವು ಐತಿಹಾಸಿಕ ವಿಟ್ ವರ್ತ್ ಹಾಲ್‌ನಲ್ಲಿ ಆಯೋಜನೆಗೊಂಡಿತ್ತು.
ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಕುಲಪತಿ ನಾಝಿರ್ ಅಫ್ಝಲ್, ಪೆಪ್ ಗಾರ್ಡಿಯೋಲವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು.
ಪದವಿ ಸ್ವೀಕಾರ ಭಾಷಣ ಮಾಡಿದ ಪೆಪ್ ಗಾರ್ಡಿಯೋಲಾ, ಇಸ್ರೇಲ್ ಮತ್ತು ಹಮಾಸ್ ನಡುವೆ ಮುಂದುವರಿದಿರುವ ಯುದ್ಧದಲ್ಲಿ ಗಾಝಾ ಪರ ತಮ್ಮ ಬೆಂಬಲ ಸೂಚಿಸಿದರಲ್ಲದೆ, "ಕಳೆದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ನಡೆಯುತ್ತಿರುವ ಘಟನೆಗಳು ನನಗೆ ತೀವ್ರ ನೋವನ್ನುಂಟು ಮಾಡಿದೆ" ಎಂದು ಹೇಳಿದ್ದಾರೆ.
"ಈ ಕುರಿತು ಯೋಚಿಸುವಾಗ, ಇದು ನಮ್ಮ ಕೆಲಸವಲ್ಲ ಎಂದು ನಾವು ಅಂದುಕೊಳ್ಳಬಹುದು. ಆದರೆ, ಎಚ್ಚರಿಕೆಯಿಂದಿರಿ. ಮುಂದಿನ ಸರದಿ ನಿಮ್ಮದಾಗಲಿದೆ. ಮುಂದಿನ ಸರದಿ ನಮ್ಮ ನಾಲ್ಕು ಅಥವಾ ಐದು ವರ್ಷದ ಮಕ್ಕಳದ್ದಾಗಿರಲಿದೆ. ಕ್ಷಮಿಸಿ, ಗಾಝಾದಲ್ಲಿನ ಹಸುಕಂದಗಳೊಂದಿಗೆ ದುಃಸ್ವಪ್ನ ಪ್ರಾರಂಭವಾದಾಗಿನಿಂದ, ನಾನು ಬೆಳಗ್ಗೆ ನಿದ್ರೆಯಿಂದ ಎದ್ದಾಗಲೆಲ್ಲ ನನ್ನ ಮಕ್ಕಳ ಮುಖವನ್ನು ನೋಡುತ್ತೇನೆ. ಆಗೆಲ್ಲ ನನಗೆ ತುಂಬಾ ಭಯವಾಗುತ್ತದೆ. ನಾವು ಜೀವಿಸುತ್ತಿರುವ ಸ್ಥಳದಿಂದ ಈ ಚಿತ್ರಗಳು ತುಂಬಾ ದೂರ ಇವೆ ಎಂದು ನಮಗನ್ನಿಸಬಹುದು ಹಾಗೂ ಅದಕ್ಕಾಗಿ ನಾವೇನು ಮಾಡಬೇಕು ಎಂದು ನೀವು ಕೇಳಲೂಬಹುದು" ಎಂದೂ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 2023ರಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್, ಸುಮಾರು 1,200 ಮಂದಿಯನ್ನು ಹತ್ಯೆಗೈದು, 250ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಸಿಕೊಂಡಿದ್ದರಿಂದ, ಅದಕ್ಕೆ ಪ್ರತೀಕಾರವಾಗಿ ಹಮಾಸ್ ಮೇಲೆ ಇಸ್ರೇಲ್ ಯುದ್ಧ ಸಾರಿದ್ದರಿಂದ, ಗಾಝಾದಲ್ಲಿ ಈ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.




