ಕುಂಬಳೆ : ಹಿಂದೆಲ್ಲಾ ಮನೆಯ ಮಕ್ಕಳು ಗುರು ಹಿರಿಯರ ಮೇಲೆ ವಿಧೇಯತೆಯಿಂದ ಭಯ-ಭಕ್ತಿಯಿಂದ ಬೆಳೆಯುತ್ತಿದ್ದರು. ಆದರೆ ಆಧುನಿಕ ಯುಗದ ವರ್ತಮಾನ ಕಾಲದಲ್ಲಿ ಮಕ್ಕಳಿಗೆ ಮತ್ತು ಮಕ್ಕಳಿಂದ ಹಿರಿಯರು ಭಯಾತಂಕಪಡುವ ಪರಿಸ್ಥಿತಿ ಉಂಟಾಗಿದೆ. ಅತಿಯಾದ ಮುದ್ದಿನ ವಾತ್ಸಲ್ಯದ ಅಪರಿಮಿತ ಪ್ರೀತಿಯಿಂದಲೇ ಇಂದೀಗ ಎಳೆ ತಲೆಮಾರು ಮಾದಕ ವ್ಯಸನಗಳಿಗೆ ಬಲಿಯಾಗಿ ಹಾದಿ ತಪ್ಪುತ್ತಿದ್ದಾರೆ. ಇದಕ್ಕೆ ಮನೆಯ ಅಮ್ಮಂದಿರ ಪ್ರೀತಿ ವಾತ್ಸಲ್ಯ ದ ಜತೆ ಮಕ್ಕಳ ಮೇಲೆ ಕಣ್ಗಾವಲು ಅಗತ್ಯ ಎಂದು ಹಿರಿಯ ಪತ್ರಕರ್ತ, 'ಕಣಿಪುರ' ಡಾಟ್ ಇನ್ ನ್ಯೂಸ್ ಮೀಡಿಯ ಸಂಪಾದಕ ಎಂ. ನಾ. ಚಂಬಲ್ತಿಮಾರ್ ನುಡಿದರು.
ಭಾನುವಾರ ಅಪರಾಹ್ನ ಕುಂಬಳೆ ಜಿಯುಪಿಎಸ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುಂಬಳೆ ವಲಯದ ಆಶ್ರಯದಲ್ಲಿ ನಡೆದ ವಿಶ್ವ ಮಾದಕ ವಸ್ತು-ಅಮಲು ಪದಾರ್ಥ ವಿರೋಧಿ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು ಯಾವುದೇ ಮಹಿಳೆ ಅಬಲೆಯಲ್ಲ. ಆಕೆಯೊಳಗೆ ಅಗಾಧ ಶಕ್ತಿ ಇದೆ. ಆಕೆ ಮಾತೃರೂಪಿಣಿಯೂ ಹೌದು, ಶಕ್ತಿ ಸ್ವರೂಪಿಣಿಯೂ ಹೌದು. ಇಂಥ ಶಕ್ತಿ ಅಂತರಂಗದಲ್ಲಿ ಸುಪ್ತವಾಗಿರುವಾಗ ಮಹಿಳೆ ಜೀವನದಲ್ಲಿ ಹಿಂದುಳಿಯಬಾರದು. ಯಶಸ್ಸಿನ ಅಮಲು ತಲೆಗೇರಿಸಿ ಸಾಧನಾಪಥದಲ್ಲಿ ನಡೆದು ಸ್ವಾವಲಂಬಿಯಾಗಬೇಕು. ಯಶೋಗಾಥೆ ರಚಿಸಬೇಕು. ಜೀವನ ಪಯರ್ಂತ ಸಾಲಗಾರರಾಗಿರುವುದು ಸಾಧನೆಯಲ್ಲಿ. ಅದು ಅವಮಾನ ಎಂದು ಚಂಬಲ್ತಿಮಾರ್ ಪ್ರೇರಣಾ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಉಪನ್ಯಾಸ ನೀಡಿದ ಹಿನ್ನೆಲೆಯಲ್ಲಿ ಎಂ. ನಾ. ಚಂಬಲ್ತಿಮಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕುಂಬಳೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಪುಣಿಯೂರು , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂಬಳೆ ವಲಯ ಮೇಲ್ವಿಚಾರಕ ಅಭಿಷೇಕ್, ಒಕ್ಕೂಟದ ಅಧ್ಯಕ್ಷ ಮುರಳೀಧರ ಯಾದವ್, ಕಂಚಿಕಟ್ಟೆ ಒಕ್ಕೂಟ ಅಧ್ಯಕ್ಷೆ ಕಸ್ತೂರಿ ಉಪಸ್ಥಿತರಿದ್ದು ಮಾತನಾಡಿದರು. ಬಾಲಕೃಷ್ಣ ಸಂಘದ ನೇತೃತ್ವದಲ್ಲಿ ಆಯೋಜಿಸಿದ ಸಭೆಯಲ್ಲಿ ಸಂಘದ ಪ್ರತಿನಿಧಿ ಸುಜಾತ ಸ್ವಾಗತಿಸಿದರು. ಸಂಧ್ಯಾ ಸ್ವಾಗತಿಸಿ, ಹರಿಣಾಕ್ಷಿ ವಂದಿಸಿದರು. ಹಲವು ಸಂಘ ಪ್ರತಿನಿಧಿಗಳು ಪಾಲ್ಗೊಂಡರು.

.jpg)
.jpg)
.jpg)
