HEALTH TIPS

ಫೋನ್ ಕ್ಯಾಮೆರಾಗಳಲ್ಲಿ ಮೆಗಾಪಿಕ್ಸೆಲ್ ಎಂಬ ಮಾಯೆ

ಹೆಚ್ಚು ಮೆಗಾಪಿಕ್ಸೆಲ್ ಇದ್ದಷ್ಟೂ ಒಳ್ಳೆಯ ಚಿತ್ರ, ವಿಡಿಯೊ ಸೆರೆಹಿಡಿಯಬಹುದು ಎಂಬುದು ಜನಸಾಮಾನ್ಯರ ಲೆಕ್ಕಾಚಾರ. ಇದನ್ನೇ ಬಂಡವಾಳವಾಗಿಸಿಕೊಂಡ ಬಹುತೇಕ ಫೋನ್ ತಯಾರಕರು, ನಮ್ಮದು 48MP ಕ್ಯಾಮೆರಾ, 100 ಮೆಗಾಪಿಕ್ಸೆಲ್ ಇದೆ, 200 ಮೆಗಾಪಿಕ್ಸೆಲ್ ಇದೆ ಅಂತೆಲ್ಲ ಪ್ರಚಾರ ಮಾಡಿಕೊಳ್ಳುತ್ತಾ ಭಾರತೀಯ ಮಾರುಕಟ್ಟೆಯಲ್ಲಿ ಸಂಪಾದನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಫೋನ್ ಖರೀದಿಗೆ ಈ ಮೆಗಾಪಿಕ್ಸೆಲ್ ಮಾನದಂಡ ಎಷ್ಟರಮಟ್ಟಿಗೆ ಸೂಕ್ತ ಎಂಬ ಮಾಹಿತಿ ಇಲ್ಲಿದೆ..

----

ಸಾಮಾಜಿಕ ಮಾಧ್ಯಮಗಳಲ್ಲಿ ಸೆಲ್ಫಿ, ರಸಮಯ ಕ್ಷಣಗಳ ಚಿತ್ರಗಳನ್ನು ಹಂಚಿಕೊಳ್ಳುವ ಅಭ್ಯಾಸ ಹೆಚ್ಚಾಗಿರುವಂತೆಯೇ, ಸ್ಮಾರ್ಟ್‌ಫೋನ್ ಖರೀದಿಸುವ ಬಹುತೇಕರು ಕ್ಯಾಮೆರಾ ಬಗ್ಗೆ ತುಸು ಹೆಚ್ಚೇ ಯೋಚಿಸಲಾರಂಭಿಸಿದ್ದಾರೆ. ನಮ್ಮ ಕಿವಿಗೆ ಹೆಚ್ಚು ಕೇಳುವ ಪ್ರಶ್ನೆ - ಎಷ್ಟು ಮೆಗಾಪಿಕ್ಸೆಲ್ ಇದೆ? ಅಂತ.

ಕ್ಯಾಮೆರಾದಲ್ಲಿ ಹೆಚ್ಚು ಮೆಗಾಪಿಕ್ಸೆಲ್ ಇದ್ದಷ್ಟೂ ಒಳ್ಳೆಯ ಚಿತ್ರ, ವಿಡಿಯೊ ಸೆರೆಹಿಡಿಯಬಹುದು ಎಂಬುದು ಜನಸಾಮಾನ್ಯರ ಲೆಕ್ಕಾಚಾರ. ಇದನ್ನೇ ಬಂಡವಾಳವಾಗಿಸಿಕೊಂಡ ಬಹುತೇಕ ಫೋನ್ ತಯಾರಕರು, ನಮ್ಮದು 48MP ಕ್ಯಾಮೆರಾ, 100 ಮೆಗಾಪಿಕ್ಸೆಲ್ ಇದೆ, 200 ಮೆಗಾಪಿಕ್ಸೆಲ್ ಇದೆ ಅಂತೆಲ್ಲ ಪ್ರಚಾರ ಮಾಡಿಕೊಳ್ಳುತ್ತಾ ಭಾರತೀಯ ಮಾರುಕಟ್ಟೆಯಲ್ಲಿ ಸಂಪಾದನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಫೋನ್ ಖರೀದಿಗೆ ಈ ಮೆಗಾಪಿಕ್ಸೆಲ್ ಮಾನದಂಡ ಎಷ್ಟರಮಟ್ಟಿಗೆ ಸೂಕ್ತ ಎಂಬ ಮಾಹಿತಿ ಇಲ್ಲಿದೆ.

ಮೆಗಾಪಿಕ್ಸೆಲ್ ಎಂದರೇನು?
ಸಾಮಾನ್ಯವಾಗಿ ಹೇಳುವುದಾದರೆ ಕ್ಯಾಮೆರಾದಲ್ಲಿ ಚಿತ್ರಗಳ ರೆಸೊಲ್ಯುಶನ್ ಅಥವಾ ಸೆನ್ಸರ್ ಸೆರೆಹಿಡಿಯಬಹುದಾದ ಪಿಕ್ಸೆಲ್‌ಗಳ ಸಂಖ್ಯೆಯನ್ನು ಅಳತೆ ಮಾಡುವ ಮಾನದಂಡ ಮೆಗಾಪಿಕ್ಸೆಲ್. 1 ಮೆಗಾಪಿಕ್ಸೆಲ್ ಎಂದರೆ 10 ಲಕ್ಷ (1 ಮಿಲಿಯ) ಪಿಕ್ಸೆಲ್‌ಗಳು ಎಂದರ್ಥ. ಹೆಚ್ಚು ಮೆಗಾಪಿಕ್ಸೆಲ್ ಇದ್ದರೆ ಚಿತ್ರವು ಹೆಚ್ಚು ಸ್ಪಷ್ಟವಾಗಿ, ಶಾರ್ಪ್ ಆಗಿ, ಛಾಯಾಗ್ರಹಣ ಪರಿಭಾಷೆಯಲ್ಲಿ ಹೇಳುವುದಾದರೆ ಹೆಚ್ಚು ಡೀಟೇಲ್ಸ್ ಹೊಂದಿರುತ್ತದೆ ಎಂಬುದು ನಿಜ. ಆದರೆ...

ಸ್ಮಾರ್ಟ್‌ಫೋನ್ ಆರಂಭದ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದದ್ದು ನೋಕಿಯಾ ಫೋನ್‌ಗಳು. 2008ರಲ್ಲಿ ಜನರ ಕೈಗೆ ಲಭ್ಯವಾದ ನೋಕಿಯಾದ ಮೊದಲ ಟಚ್ ಸ್ಕ್ರೀನ್ ಫೋನ್ 'ನೋಕಿಯಾ 5800 ಎಕ್ಸ್‌ಪ್ರೆಸ್‌ಮ್ಯೂಸಿಕ್'. ಅದರಲ್ಲಿದ್ದುದು 3.2 ಮೆಕಾಪಿಕ್ಸೆಲ್ ಲೆನ್ಸ್. ಅದರಲ್ಲಿ ಸೆರೆಯಾದ ಚಿತ್ರಗಳಿಗೂ ಇಂದಿನ 8MP, 12MP, 24MP ಸಾಮರ್ಥ್ಯದ ಕೆಲವು ಫೋನ್‌ಗಳಲ್ಲಿ ಸೆರೆಯಾದ ಚಿತ್ರಗಳಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ ಎಂಬುದು ಅನುಭವಕ್ಕೆ ಬಂದ ವಿಚಾರ.

ಆಂಡ್ರಾಯ್ಡ್ ಫೋನ್‌ಗಳಿಗಿಂತ ಐಫೋನ್‌ನಲ್ಲಿ ಸೆರೆಯಾದ ಚಿತ್ರಗಳು ಹೆಚ್ಚು ಸ್ಪಷ್ಟ ಎಂಬುದು ಹೆಚ್ಚು ಕೇಳಿಬರುತ್ತಿರುವ ಮಾತು. ಆದರೆ ಗಮನಿಸಬೇಕಾದ ವಿಚಾರವೆಂದರೆ, 2007ರಲ್ಲಿ ಮಾರುಕಟ್ಟೆಗೆ ಬಂದಿದ್ದ ಐಫೋನ್‌ನ ಪ್ರಧಾನ ಕ್ಯಾಮೆರಾದಲ್ಲಿ ಇದ್ದುದು 2 ಮೆಗಾಪಿಕ್ಸೆಲ್ ಸಾಮರ್ಥ್ಯ. ನಂತರ 2011ರಿಂದ 2014ರ ವರೆಗೂ 8MP ಕ್ಯಾಮೆರಾ ಹೊಂದಿದ್ದ ಅದು, 2015ರಿಂದ (ಐಫೋನ್ 6S) 12MP ಲೆನ್ಸ್ ಅಳವಡಿಸಿದರೆ, 2022ರ ಸಂದರ್ಭದಲ್ಲಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮೆಗಾಪಿಕ್ಸೆಲ್ ಕ್ರೇಝ್ ಹೆಚ್ಚಾಗುತ್ತಿದ್ದಂತೆಯೇ ತನ್ನ ಪ್ರೊ ಹಾಗೂ ಪ್ರೊ ಮ್ಯಾಕ್ಸ್ (ಐಫೋನ್ 14 ಸರಣಿ) ಮಾದರಿಗಳಲ್ಲಿ 48MP ಸಾಮರ್ಥ್ಯದ ಕ್ಯಾಮೆರಾ ಅಳವಡಿಸಿತು.

48MP ಕ್ಯಾಮೆರಾದಲ್ಲಿ ಸೆರೆಯಾದ ಆಂಡ್ರಾಯ್ಡ್ ಫೋನ್‌ಗಿಂತ ಅಂದಿನ 3.2 ಮೆಗಾಪಿಕ್ಸೆಲ್‌ನ ನೋಕಿಯಾ ಅಥವಾ 8 ಮೆಗಾಪಿಕ್ಸೆಲ್‌ನ ಐಫೋನ್‌ನ ಚಿತ್ರಗಳೇ ಚೆನ್ನಾಗಿವೆ ಎಂಬುದು ಚರ್ಚೆಯ ವಿಷಯ. ಯಾಕೆ ಹೀಗೆ?

ಮೆಗಾಪಿಕ್ಸೆಲ್ ಒಂದೇ ಕಾರಣ ಅಲ್ಲ
ಇದಕ್ಕೆ ಕಾರಣವಿದೆ. ಹೆಚ್ಚು ಮೆಗಾಪಿಕ್ಸೆಲ್ ಇದ್ದರೆ, ಚಿತ್ರಗಳ ಗುಣಮಟ್ಟ ಚೆನ್ನಾಗಿರುತ್ತದೆ ಎಂಬುದರಲ್ಲಿ ತಕರಾರಿಲ್ಲ. ಆದರೆ, ಅತ್ಯುತ್ತಮ ಗುಣಮಟ್ಟಕ್ಕೆ ಮೆಗಾಪಿಕ್ಸೆಲ್ ಒಂದೇ ಕಾರಣವಲ್ಲ. ಆ ಸಾಧನದ ಪ್ರೊಸೆಸರ್ ಯಾವುದು, ಲೆನ್ಸ್ ಯಾವ ಕಂಪನಿಯದು, ಅದರಲ್ಲಿರುವ ಸೆನ್ಸರ್‌ನ ಗಾತ್ರ, ಅಪರ್ಚರ್ (ಬೇಕಾದಷ್ಟು ಬೆಳಕನ್ನು ಗ್ರಾಹ್ಯ ಮಾಡುವ ಭಾಗ) - ಇವೆಲ್ಲವೂ, ಕಡಿಮೆ ಬೆಳಕಿನಲ್ಲೂ ಉತ್ತಮ ಗುಣಮಟ್ಟ, ಸ್ಪಷ್ಟತೆ, ಚಿತ್ರದೊಳಗೆ ಹೆಚ್ಚು ಡೀಟೇಲ್ಸ್ ಒದಗಿಸಬಲ್ಲ ಅಂಶಗಳು. 108 ಮೆಗಾಪಿಕ್ಸೆಲ್ ಇದ್ದರೂ ಕೆಲವು ಫೋನ್‌ಗಳಲ್ಲಿ ಚಿತ್ರಗಳ ಗುಣಮಟ್ಟ ಕಳಪೆಯಾಗಿರುತ್ತವೆ ಯಾಕೆ ಅಥವಾ 12 ಮೆಗಾಪಿಕ್ಸೆಲ್ ಕ್ಯಾಮೆರಾ ಚಿತ್ರವು ನೂರೆಂಟು ಮೆಗಾಪಿಕ್ಸೆಲ್ ಫೋನ್‌ಗಿಂತ ಅದ್ಭುತವಾಗಿ ಮೂಡಿಬಂದಿದ್ದು ಹೇಗೆ ಎಂಬುದಕ್ಕೆ ಇದುವೇ ಉತ್ತರ.

ಮೆಗಾಪಿಕ್ಸೆಲ್ ಹೆಚ್ಚು ಯಾಕೆ ಬೇಕು?
ಚಿತ್ರದ ನಿರ್ದಿಷ್ಟ ಭಾಗವನ್ನಷ್ಟೇ ಫೋಕಸ್ ಮಾಡಿ, ಕ್ರಾಪ್ ಮಾಡಿದರೂ ಬ್ಲರ್ ಆಗದೆ, ಚಿತ್ರ ಸ್ಪಷ್ಟವಾಗಿರಬೇಕು ಅಥವಾ ದೊಡ್ಡ ಗಾತ್ರದಲ್ಲಿ ಚಿತ್ರದ ಮುದ್ರಿತ ಪ್ರತಿ ಮಾಡಿಸಬೇಕು, ಇಲ್ಲವೇ ಚಿತ್ರವನ್ನು ಹೆಚ್ಚು ಝೂಮ್ ಮಾಡಿ ನೋಡಬೇಕು ಅಂತಾದರೆ ಹೆಚ್ಚು ಮೆಗಾಪಿಕ್ಸೆಲ್ ಕ್ಯಾಮೆರಾ ಒಳ್ಳೆಯದು. ಈ ಮೂರೂ ಸಂದರ್ಭಗಳು ನಮಗೆಷ್ಟು ಮುಖ್ಯ ಎಂಬುದರ ಆಧಾರದಲ್ಲಿ, ಹೆಚ್ಚು ದರ ತೆತ್ತು, ಮೆಗಾಪಿಕ್ಸೆಲ್ ಹೆಚ್ಚಿರುವ ಸ್ಮಾರ್ಟ್ ಫೋನ್ ಖರೀದಿಸಬಹುದು. ಆದರೆ ಮೇಲೆ ಹೇಳಿದ ಉಳಿದ ನಾಲ್ಕು ಅಂಶಗಳೂ ಮುಖ್ಯ ಎಂಬುದು ಮರೆಯದಿರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries