ಕೀವ್: ಸೇನಾ ಸಂಘರ್ಷದಲ್ಲಿ ನಿಜವಾದ ಕದನ ವಿರಾಮ ಸಾಧಿಸುವುದು ಹೇಗೆ...? ನೈಜ ಶಾಂತಿ ಹೇಗೆ ಸಿಗುತ್ತದೆ...? ಎಂಬ ಪ್ರಶ್ನೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ಕೇಳಿದ್ದಾರೆ.
ರಷ್ಯಾದ ದಾಳಿಯನ್ನು ಕಳೆದ ಎರಡು ವರ್ಷಗಳಿಂದ ಉಕ್ರೇನ್ ಎದುರಿಸುತ್ತಿದೆ.
ಜೋ ಬೈಡನ್ ಅವರಿದ್ದಾಗ ಘೋಷಿಸಲಾಗಿದ್ದ ಸೇನಾ ನೆರವನ್ನು ಮುಂದುವರಿಸುವಂತೆ ಟ್ರಂಪ್ ಸರ್ಕಾರವನ್ನು ಝೆಲೆನ್‌ಸ್ಕಿ ನಿರಂತರವಾಗಿ ಕೇಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಶ್ವೇತ ಭವನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕದನ ವಿರಾಮ ಬೇಕೆಂದರೆ, ತನ್ನಲ್ಲಿರುವ ಅಪರೂಪದ ಖನಿಜ ಸಂಪತ್ತನ್ನು ತನಗೆ ನೀಡಬೇಕು ಎಂಬ ಷರತ್ತನ್ನು ಟ್ರಂಪ್ ಮುಂದಿಟ್ಟಿದ್ದರು. ಅದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ಝೆಲೆನ್‌ಸ್ಕಿ, ಸಭೆಯ ಮಧ್ಯೆಯೇ ಎದ್ದು ಹೊರನಡೆದಿದ್ದರು.
ಇದೀಗ ಕದನ ವಿರಾಮ ಮತ್ತು ಶಾಂತಿ ಸ್ಥಾಪನೆ ಹೇಗೆ ಎಂಬ ಪ್ರಶ್ನೆಯನ್ನು ಝೆಲೆನ್‌ಸ್ಕಿ ಅವರು ಟ್ರಂಪ್ ಅವರನ್ನು ಚರ್ಚೆಯ ಸಂದರ್ಭದಲ್ಲಿ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, 'ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಬೇಗ ಯುದ್ಧ ಕೊನೆಗೊಳಿಸಲು ಹೇಳುವೆ' ಎಂದು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಕೋಟು ಬದಲಿಸಿದ ಝೆಲೆನ್‌ಸ್ಕಿ
ಈ ಹಿಂದಿನ ಭೇಟಿ ಸಂದರ್ಭದಲ್ಲಿ ಝೆಲೆನ್‌ಸ್ಕಿ ತೊಟ್ಟಿದ್ದ ಉಡುಪಿಗೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದರು. ರಷ್ಯಾದೊಂದಿಗಿನ ಯುದ್ಧದಲ್ಲಿ ಹೋರಾಡುತ್ತಿರುವ ಸೈನಿಕರನ್ನು ಬೆಂಬಲಿಸಲು ಸೇನಾ ಸಮವಸ್ತ್ರ ಹೋಲುವ ಟಿ-ಶರ್ಟ್, ಉದ್ದ ತೋಳಿನ ಟಾಪ್ ತೊಟ್ಟು ಬಂದಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.
ಹೀಗಾಗಿ ಈ ಬಾರಿ ತಮ್ಮ ಉಡುಗೆ ತೊಡುಗೆಯಲ್ಲಿ ಒಂದಷ್ಟು ಬದಲಾವಣೆಯನ್ನು ಝೆಲೆನ್‌ಸ್ಕಿ ಮಾಡಿಕೊಂಡಿದ್ದಾರೆ. ಸೂಟ್ ತೊಡದಿದ್ದರೂ, ಕಪ್ಪು ಬಣ್ಣದ ಜಾಕೆಟ್ ಮತ್ತು ಶರ್ಟ್ ತೊಟ್ಟು ಟ್ರಂಪ್ ಭೇಟಿಗೆ ತೆರಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲೂ ಝೆಲೆನ್‌ಸ್ಕಿ ಅವರು ಕಡುಕಪ್ಪು ಬಣ್ಣದ ಜಾಕೆಟ್ ತೊಟ್ಟು ಟ್ರಂಪ್ ಭೇಟಿಯಾಗಿದ್ದರು. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಲಂಡನ್‌ನಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲೂ ಝೆಲೆನ್‌ಸ್ಕಿ ಉಡುಪು ಎಂದಿನಂತೆಯೇ ಇತ್ತು.




