ಟೆಹರಾನ್: ತನ್ನ ಪರಮಾಣು ಯೋಜನೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು 'ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ' ಎಂದು ಇರಾನ್ ಸರ್ಕಾರ ಮಂಗಳವಾರ ಹೇಳಿದೆ.
ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆಸಿತ್ತು. ಇದರಿಂದ ಮೂರು ಪರಮಾಣು ಘಟಕಗಳಿಗೂ ಹಾನಿ ಉಂಟಾಗಿದೆ.
'ಅಣು ಯೋಜನೆ ಮುಂದುವರಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ದಾಳಿಯಿಂದ ಆಗಿರುವ ಹಾನಿಯನ್ನು ಅಂದಾಜು ಮಾಡುತ್ತಿದ್ದೇವೆ' ಎಂದು ಇರಾನ್‌ನ ಅಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಇಸ್ಲಾಮಿ ಹೇಳಿದ್ದಾರೆ.
'ಪರಮಾಣು ಘಟಕಗಳನ್ನು ಪುನರಾರಂಭಿಸಲು ಬೇಕಾದ ಯೋಜನೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಲಾಗಿದೆ ಮತ್ತು ಉತ್ಪಾದನೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ನಮ್ಮ ಕಾರ್ಯತಂತ್ರವಾಗಿದೆ' ಎಂದು ತಿಳಿಸಿದ್ದಾರೆ.
ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸಲಹೆಗಾರರೊಬ್ಬರು, ತಮ್ಮ ದೇಶದಲ್ಲಿ ಶುದ್ಧೀಕರಿಸಿದ ಯುರೇನಿಯಂನ ದಾಸ್ತಾನು ಇದ್ದು, 'ಆಟ ಇನ್ನೂ ಮುಗಿದಿಲ್ಲ' ಎಂದಿದ್ದಾರೆ.
ಫೋರ್ಡೊ ಪರಮಾಣು ಘಟಕದ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ, ಇಸ್ರೇಲ್ ಕೂಡಾ ದಾಳಿ ಮಾಡಿತ್ತು. 'ಫೋರ್ಡೊ ಘಟಕವನ್ನು ತಲುಪುವ ದಾರಿಯನ್ನು ಧ್ವಂಸ ಮಾಡಿದ್ದೇವೆ' ಎಂದು ಇಸ್ರೇಲ್ ಸೇನೆ ಹೇಳಿಕೊಂಡಿತ್ತು.




