ಉತ್ತರಕಾಶಿ: ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸೋಮವಾರ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಯಾತ್ರಿಕರು ಮೃತಪಟ್ಟಿದ್ದು, ಓರ್ವನನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಯಾತ್ರಿಕರ ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ರಕ್ಷಿಸಲಾದ ಯಾತ್ರಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತನ್ನು ಪತ್ತೆ ಕಾರ್ಯ ನಡೆಯುತ್ತಿದೆ. ಮೃತದೇಹಗಳನ್ನು ಜಾನಕಿಚಟ್ಟಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಉತ್ತರಕಾಶಿಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಯಾತ್ರೆ ಮಾರ್ಗದಿಂದ ಸುಮಾರು 20 ಮೀಟರ್ ಎತ್ತರದಲ್ಲಿ ಭೂಕುಸಿತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸುಮಾರು ನಾಲ್ವರು ಯಾತ್ರಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉಳಿದಿರುವ ಯಾತ್ರಿಕರನ್ನು ಪತ್ತೆಹಚ್ಚಲು ಹೈ-ಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಯಾತ್ರಿಕ ಮುಂಬೈನ ರಸಿಕ್ ಎಂಬಾತನನ್ನು ಜಾನಕಿಚಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಯಿತು. ಯಾತ್ರಿಕನಿಗೆ ಪ್ರಜ್ಞೆ ಇದೆ ಎಂದು ಉತ್ತರಕಾಶಿಯಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಯಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಶಾರ್ದುಲ್ ಸಿಂಗ್ ತಿಳಿಸಿದ್ದಾರೆ.
ಘಟನೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.




