ಬದಿಯಡ್ಕ: ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನದ ಪ್ರತಿಷ್ಠಿತ "ಕನ್ನಡ ಪಯಸ್ವಿನಿ ಪ್ರಶಸ್ತಿ "ನೀಡಿ ಪುರಸ್ಕಾರಿಸಲಾಯಿತು.
ಕಾಸರಗೋಡಿನ ಏತಡ್ಕ ನಾರಾಯಣ ಅಲೆವೂರಾಯರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪೆÇ್ರ. ಎ ಶ್ರೀನಾಥ್ ಬಿಳಿಮಲೆಯವರ ವ್ಯಕ್ತಿ ಸಾಧನೆ ಪರಿಚಯ ನೀಡಿದರು. ಡಾ. ನವೀನ್ ಕುಲಮರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ನರಸಿಂಹ ಭಟ್ ಏತಡ್ಕ, ಕನ್ನಡ ಭವನ ಕೋಶಾಧಿಕಾರಿ ಸಂಧ್ಯರಾಣಿ ಟೀಚರ್ ಉಪಸ್ಥಿತರಿದ್ದರು.
ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಕನ್ನಡದ ಚಟುವಟಿಕೆ ರಾಜ್ಯಕ್ಕೆ ಮಾದರಿಯಾಗಿದೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪೂರ್ಣ ಅರಿವಿದ್ದು, ಸಂವಿಧಾನಬದ್ಧ ಚೌಕಟ್ಟಿನೊಳಗೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಶ್ರಮಿಸುವುದರ ಜತೆಗೆ ಸೀಮಿತ ಪರಿಧಿಗೂ ಮೀರಿ ಇಲ್ಲಿನ ಕನ್ನಡಿಗರಿಗೆ ಸಹಾಯ ಸಹಕಾರ ನೀಡಲು ಬದ್ಧನಾಗಿರುವುದಾಗಿ ತಿಳಿಸಿದರು. ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.


