ನವದೆಹಲಿ: 'ನ್ಯಾಯಾಂಗದಲ್ಲಿ ಕಂಡುಬರುವ ಭ್ರಷ್ಟಾಚಾರ ಮತ್ತು ದುರ್ವರ್ತನೆ ಇಡೀ ವ್ಯವಸ್ಥೆಯ ಸಮಗ್ರತೆ ಕುರಿತ ನಂಬಿಕೆಯನ್ನು ಹಾಳು ಮಾಡುತ್ತವೆ. ನ್ಯಾಯಾಂಗ ಕುರಿತು ಸಾರ್ವಜನಿಕರಲ್ಲಿ ನಕಾರಾತ್ಮಕ ಭಾವನೆ ಮೂಡುವಂತೆ ಮಾಡುತ್ತವೆ' ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದ್ದಾರೆ.
ಬ್ರಿಟನ್‌ನ ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
'ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಮತ್ತು ದುರ್ವರ್ತನೆ ಘಟನೆಗಳು ಕಂಡುಬಂದಾಗಲೆಲ್ಲಾ ಸುಪ್ರೀಂ ಕೋರ್ಟ್ ತಕ್ಷಣವೇ ಕ್ರಮ ಕೈಗೊಳ್ಳುತ್ತಾ ಬಂದಿದೆ. ದುರ್ವರ್ತನೆ ವಿರುದ್ಧವೂ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ' ಎಂದು ಸಿಜೆಐ ಗವಾಯಿ ಹೇಳಿದ್ದಾರೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಸಿಜೆಐ ಈ ಮಾತು ಹೇಳಿದ್ದಾರೆ.
'ಪ್ರತಿಯೊಂದು ವ್ಯವಸ್ಥೆಯು ಎಷ್ಟೇ ದೃಢವಾಗಿದ್ದರೂ, ಅದರಲ್ಲಿ ವೃತ್ತಿಪರತೆಗೆ ಸಂಬಂಧಿಸಿ ದುರ್ವರ್ತನೆಗೆ ಒಳಗಾಗುತ್ತದೆ. ಇಂತಹ ಘಟನೆಗಳು ನ್ಯಾಯಾಂಗ ವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿನ ನಂಬಿಕೆಗೆ ಧಕ್ಕೆ ತರುತ್ತವೆ. ಆದರೆ, ನಂಬಿಕೆಯನ್ನು ಮರುಸ್ಥಾಪಿಸುವಲ್ಲಿ ತ್ವರಿತವಾದ ಮತ್ತು ನಿರ್ಣಾಯಕ ಕ್ರಮಗಳು ಪರಿಣಾಮಕಾರಿ ಆಗುತ್ತವೆ' ಎಂದು ಹೇಳಿದ್ದಾರೆ.
ನಿವೃತ್ತರಾದ ನಂತರ ಇಲ್ಲವೇ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನ್ಯಾಯಮೂರ್ತಿಗಳು ವಿವಿಧ ಸರ್ಕಾರಿ ಹುದ್ದೆಗಳನ್ನು ಅಲಂಕರಿಸುವ ಬಗ್ಗೆ ಪ್ರಸ್ತಾಪಿಸಿದ ಅವರು, ಇಂತಹ ನಡೆಗಳು ನೈತಿಕತೆ ಕುರಿತು ಆತಂಕ ಉಂಟು ಮಾಡುವ ಜೊತೆಗೆ ಸಾರ್ವಜನಿಕರಿಂದ ಪರಿಶೀಲನೆಗೂ ಒಳಗಾಗುತ್ತವೆ' ಎಂದಿದ್ದಾರೆ.
- ಸಿಜೆಐ ಬಿ.ಆರ್.ಗವಾಯಿಕೊಲಿಜಿಯಂ ವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆಗಳಿವೆ. ಆದರೆ ಈ ವ್ಯವಸ್ಥೆಯಲ್ಲಿನ ಲೋಪಗಳಿಗೆ ಕಂಡುಕೊಳ್ಳುವ ಪರಿಹಾರವು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತೆ ಇರಬಾರದು. ನ್ಯಾಯಮೂರ್ತಿಗಳು ಬಾಹ್ಯ ನಿಯಂತ್ರಣದಿಂದ ಮುಕ್ತವಾಗಿ ಕಾರ್ಯ ನಿರ್ವಹಿಸುವಂತಿರಬೇಕು.




