ಲಂಡನ್: 'ಭಾರತದ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಬಾಂಗ್ಲಾದೇಶ ಬಯಸುತ್ತದೆ, ಆದರೆ, ಯಾವಾಗಲೂ ಏನೋ ತಪ್ಪಾಗುತ್ತದೆ' ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ತಿಳಿಸಿದರು.
ಲಂಡನ್‌ನಲ್ಲಿ ಬುಧವಾರ ಛತಾಂ ಹೌಸ್ ಚಿಂತಕರ ಚಾವಡಿಯ ನಿರ್ದೇಶಕಿ ಬ್ರಾನ್‌ವೆನ್ ಮಡ್ಡಾಕ್ಸ್ ಜೊತೆಗೆ ನಡೆದ ಸಂವಾದದಲ್ಲಿ, ಭಾರತದೊಟ್ಟಿಗಿನ ದ್ವಿಪಕ್ಷೀಯ ಸಂಬಂಧ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ಮರಳಿ ಸ್ಥಾಪನೆ ಮಾಡುವ ಕುರಿತಂತೆಯೂ ಚರ್ಚೆ ನಡೆಸಿದರು.
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಮರಳಿ ದೇಶಕ್ಕೆ ಹಸ್ತಾಂತರಿಸುವ ಬಗ್ಗೆ ಭಾರತಕ್ಕೆ ನೀಡಲಾದ ಅನಾಪೌಚರಿಕ ರಾಜತಾಂತ್ರಿಕ ಮಾಹಿತಿಯ ಸಂಗತಿಯನ್ನು ಸಂವಾದದ ವೇಳೆ ಬ್ರಾನ್‌ವೆನ್ ಉಲ್ಲೇಖಿಸಿದರು.
ಇದಕ್ಕೆ ಉತ್ತರಿಸಿದ ಯೂನೂಸ್, 'ಈ ಪ‍್ರಕ್ರಿಯೆ ಮುಂದುವರಿಯಲಿದೆ. ಇಡೀ ಪ್ರಕ್ರಿಯೆ ಕಾನೂನಾತ್ಮಕ ಹಾಗೂ ಸರಿಯಾದ ಮಾರ್ಗದಲ್ಲಿ ಸಾಗಬೇಕು ಎಂದು ನಾವು ಬಯಸುತ್ತೇವೆ. ಭಾರತದ ಜೊತೆಗೆ ಸದಾ ಅತ್ಯುತ್ತಮ ಸಂಬಂಧ ಬಯಸುತ್ತಿದ್ದೇವೆ. ಅವರು ನಮ್ಮ ನೆರೆಯ ರಾಷ್ಟ್ರವಾಗಿದ್ದು, ನಾವು ಅವರೊಂದಿಗೆ ಯಾವುದೇ ಮೂಲಭೂತ ಸಮಸ್ಯೆಯನ್ನು ಹೊಂದಲು ಬಯಸುವುದಿಲ್ಲ' ಎಂದು ತಿಳಿಸಿದರು.
'ಭಾರತದ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದ್ದಂತೆಯೇ, ಪ್ರತಿ ಬಾರಿಯೂ ವಿಷಯಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ' ಎಂದರು.
'ಶೇಖ್ ಹಸೀನಾ ಕುರಿತು ಭಾರತದ ಅಸ್ಪಷ್ಟ ಪಾತ್ರ'ದ ಕುರಿತಂತೆ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, 'ಹಸೀನಾ ಅವರ ಮೇಲಿನ ಎಲ್ಲ ಸಿಟ್ಟು ಈಗ ಭಾರತದ ಕಡೆಗೆ ವರ್ಗಾವಣೆಯಾಗಿದೆ. ಏಕೆಂದರೆ, ಈಗ ಅವರು ಅಲ್ಲಿ ನೆಲಸಿದ್ದಾರೆ' ಎಂದರು.
ಮೊಹಮ್ಮದ್ ಯೂನುಸ್,ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಶೇಖ್ ಹಸೀನಾ ಅವಧಿಯಲ್ಲಿ ಕದ್ದೊಯ್ಯಲಾದ ಹಣವನ್ನು ಮರಳಿ ಪಡೆಯುವ ಸಂಬಂಧ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಜೊತೆ ನಾನು ನೇರ ಮಾತುಕತೆ ನಡೆಸಿಲ್ಲ.




