ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಘರ್ಷದ ವಾತಾವರಣ ತಿಳಿಗೊಳಿಸಿ, ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡಲು ವಿಸ್ತೃತವಾದ ಮಾತುಕತೆಗೆ ಮಧ್ಯಸ್ಥಿಕೆಗೆ ವಹಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೊ ಜರ್ದಾರಿ ಮನವಿ ಮಾಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಮಾತನಾಡಿದ ಶೆಹಬಾಜ್ ಷರೀಫ್, ವಾಷಿಂಗ್ಟನ್‌ನಲ್ಲಿ ಅಮೆರಿಕ ಮೂಲದ ಪಾಕಿಸ್ತಾನಿ ಪತ್ರಕರ್ತರೊಂದಿಗೆ ಬಿಲಾವಲ್ ಭುಟ್ಟೊ ಅವರು ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದ ಒತ್ತಡ ತಗ್ಗಿಸುವಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು ಎಂಬುದಾಗಿ ಮುಕ್ತಕಂಠದಿಂದ ಹೊಗಳಿದ್ದಾರೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ.
'ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಕಾರಣ ಎಂಬ ಸುಳ್ಳು ಆರೋಪವನ್ನು ಹೊರಿಸಲಾಗಿತ್ತು ಎಂಬುದು ಇತ್ತೀಚೆಗೆ ನಡೆದ ನಾಲ್ಕು ದಿನಗಳ ಸೇನಾ ಸಂಘರ್ಷವು ಬಯಲು ಮಾಡಿದೆ. ಎರಡೂ ದೇಶಗಳ ಮಧ್ಯೆ ಕದನ ವಿರಾಮ ಘೋಷಣೆ ಮತ್ತು ಶಾಂತಿ ಸ್ಥಾಪನೆಯಲ್ಲಿ ಟ್ರಂಪ್ ಮಹತ್ವದ ಪಾತ್ರ ನಿರ್ವಹಿಸಿದ್ದರು ಎಂದು ಷರೀಫ್ ಹೇಳಿದ್ದಾರೆ' ಎಂಬುದಾಗಿ ಪತ್ರಿಕೆ ವರದಿಯಲ್ಲಿ ತಿಳಿಸಿದೆ.
ಪಾಕ್ ಜತೆಗಿನ ಸಂಘರ್ಷ ನಿಲ್ಲಿಸುವಲ್ಲಿ ಟ್ರಂಪ್ ಅವರ ಪಾತ್ರವನ್ನು ಭಾರತ ಅಲ್ಲಗಳೆದಿದೆ. ದ್ವಿಪಕ್ಷೀಯ ವಿಚಾರಕ್ಕೆ ಸಂಬಂಧಿಸಿದಂತೆ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ತಿರಸ್ಕರಿಸುತ್ತಲೇ ಬಂದಿದೆ.
'ಟ್ರಂಪ್ ಶಾಂತಿ ಮತ್ತು ಫಲಪ್ರದ ವ್ಯವಹಾರಗಳನ್ನು ಬಯಸುವ ವ್ಯಕ್ತಿ. ಅವರು ಪ್ರತ್ಯಕ್ಷ ಮತ್ತು ಪರೋಕ್ಷ ಯುದ್ಧದ ವಿರೋಧಿಯೂ ಆಗಿದ್ದಾರೆ' ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.
'ಪಹಲ್ಗಾಮ್ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾದ ಅಂತರರಾಷ್ಟ್ರೀಯ ತನಿಖೆ ನಡಯಬೇಕು ಎನ್ನುವುದು ನಮ್ಮ ಬೇಡಿಕೆ. ಭಾರತವು ಬಲವಾದ ಸಾಕ್ಷ್ಯಗಳೊಂದಿಗೆ ವಿಶ್ವ ಸಮುದಾಯಕ್ಕೆ ಈ ಘಟನೆಯ ಬಗ್ಗೆ ಮನವರಿಕೆ ಮಾಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.




