ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಧ್ಯಮ ಸಂವಾದಗಳು ಪೂರ್ವನಿರ್ಧರಿತವಾಗಿರುತ್ತವೆ. ಹಿಂದಿನ ಪ್ರಧಾನಿಗಳಂತೆ ಮುಕ್ತವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುವ ಧೈರ್ಯ ಅವರಲ್ಲಿ ಇಲ್ಲ ಎಂದು ಕಾಂಗ್ರೆಸ್ ಭಾನುವಾರ ಟೀಕಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈರಾಮ್ ರಮೇಶ್, 'ಜಗತ್ತಿನಾದ್ಯಂತ ನಾಯಕರು ಕಾಲ ಕಾಲಕ್ಕೆ ಮುಕ್ತ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ.
ಆದರೆ, ನಮ್ಮಲ್ಲಿ ಕಳೆದ 11 ವರ್ಷಗಳಲ್ಲಿ ಒಂದೇ ಒಂದೂ ನಡೆದಿಲ್ಲ' ಎಂದು ಕುಟುಕಿದ್ದಾರೆ.
'ನರೇಂದ್ರ ಮೋದಿ ಅವರು ಕಳೆದ ವರ್ಷ ಚುನಾವಣಾ ಪ್ರಚಾರ ಸಮಾವೇಶದ ಸಂದರ್ಭದಲ್ಲಿ ತಮ್ಮ ಮಾಧ್ಯಮ ಸಂವಾದವನ್ನು ತಾವೇ ಚಿತ್ರಕತೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು. ಅದರಲ್ಲಿ ತಾವು ಜೈವಿಕವಾಗಿ ಜನಿಸಿದವರಲ್ಲ ಎಂದು ಹೇಳಿಕೊಂಡಿದ್ದರು. ಆದರೆ, ಮುಕ್ತವಾಗಿ ಪತ್ರಿಕಾಗೋಷ್ಠಿ ನಡೆಸುವ ಧೈರ್ಯ ಮೋದಿಯವರಲ್ಲಿ ಇಲ್ಲ' ಎಂದಿದ್ದಾರೆ.
'ಹಿಂದಿನ ಎಲ್ಲ ಆಡಳಿತಗಾರರಿಗೆ ಹೋಲಿಸಿದರೆ ಇದು ಸಂಪೂರ್ಣ ತದ್ವಿರುದ್ಧವಾಗಿದೆ' ಎಂದೂ ಹೇಳಿದ್ದಾರೆ.
ಮೋದಿ ಅವರು 2014ರಲ್ಲಿ ಅಧಿಕಾರಕ್ಕೇರಿದಾಗಿನಿಂದ ಒಂದೇ ಒಂದು ಮಾಧ್ಯಮಗೋಷ್ಠಿ ನಡೆಸಿಲ್ಲ. ಹಾಗಾಗಿಯೇ ಕಾಂಗ್ರೆಸ್ ಅವರನ್ನು ಗುರಿಯಾಗಿಸಿ ಟೀಕಿಸುತ್ತಿದೆ.




