HEALTH TIPS

ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ: ಕೇಂದ್ರ ಸಚಿವ ಮಜುಂದಾರ್‌ ಬಂಧನ, ಬಿಡುಗಡೆ

ಕೋಲ್ಕತ್ತ: ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದನ್ನು ಖಂಡಿಸಿ ಪ್ರತಿಭಟಿಸಿದ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ ಅವರನ್ನು ಕೋಲ್ಕತ್ತ ಪೊಲೀಸರು ಶನಿವಾರ ರಾತ್ರಿ ಬಂಧಿಸಿದರು.

ವೈಯಕ್ತಿಕ ಬಾಂಡ್‌ ಸಲ್ಲಿಸಿ ಜಾಮೀನು ಪಡೆಯುವಂತೆ ಸೂಚಿಸಿದರೂ, ಈ ಪ್ರಸ್ತಾವವನ್ನು ತಿರಸ್ಕರಿಸಿದ ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಿದರು.

ಲಾಲ್‌ ಬಜಾರ್‌ನಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಿಂದ ಹೊರಬಂದು ಸುದ್ದಿಗಾರರೊಂದಿಗೆ ‌ಮಾತನಾಡಿದ ಮಜುಂದಾರ್‌ ಅವರು, 'ಪಶ್ಚಿಮ ಬಂಗಾಳವು ಪ್ರಜಾಪ್ರಭುತ್ವವನ್ನು ಕೊಲ್ಲುವ ರಾಜ್ಯವಾಗಿ ಮಾರ್ಪಟ್ಟಿದೆ' ಎಂದು ದೂರಿದರು.

ಪ್ರತಿಭಟನೆಯ ವೇಳೆ ಬಂಧನಕ್ಕೊಳಗಾದವರು ಪೊಲೀಸ್‌ ಠಾಣೆಗಳಲ್ಲಿ ವೈಯಕ್ತಿಕ ಬಾಂಡ್‌ ಸಲ್ಲಿಸಿ ಜಾಮೀನು ಪಡೆಯುವುದಿಲ್ಲ. ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಒತ್ತಾಯಿಸಿ, 'ಜಾಮೀನು ನಿರಾಕರಣೆ' ಆಂದೋಲನ ನಡೆಸುವುದಾಗಿ ಹೇಳಿದರು.

ಕೋಲ್ಕತ್ತದ ಶಿಕ್ಷಣ ಸಂಸ್ಥೆಗಳ ಒಳಗೆ ಎಂಟು ತಿಂಗಳ ಅವಧಿಯಲ್ಲಿ ಎರಡು ಸಾಮೂಹಿಕ ಅತ್ಯಾಚಾರ ಘಟನೆಗಳು ನಡೆದಿವೆ. ಆಡಳಿತ ಎಲ್ಲಿದೆ? ಭಯದಿಂದಾಗಿ ಇಂತಹ ಎಷ್ಟೋ ಘಟನೆಗಳು ವರದಿಯಾಗುತ್ತಿಲ್ಲ ಎಂದು ಕೇಂದ್ರ ಸಚಿವರು ಹರಿಹಾಯ್ದರು.

ಅತ್ಯಾಚಾರ ನಡೆದ ದಕ್ಷಿಣ ಕೋಲ್ಕತ್ತದಲ್ಲಿರುವ ಕಾನೂನು ಕಾಲೇಜಿಗೆ ಬಿಜೆಪಿಯು ಶನಿವಾರ ರಾತ್ರಿ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಂಡಿತ್ತು. ಇದನ್ನು ತಡೆದ ಪೊಲೀಸರು ಪ್ರಮುಖರನ್ನು ಬಂಧಿಸಿದ್ದರು.

'ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಹೆಚ್ಚುತ್ತಿರುವ ಅಪರಾಧ ನಿಯಂತ್ರಿಸುವಂತೆ ಆಗ್ರಹಿಸಲು ನಾವಿಲ್ಲಿ ಸೇರಿದ್ದರೂ ಪೊಲೀಸರು ಅವಕಾಶ ನೀಡುತ್ತಿಲ್ಲ. ಗೃಹ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಯು ಮಹಿಳೆಯರ ರಕ್ಷಣೆಯ ಜವಾಬ್ದಾರಿ ಹೊರಬೇಕು. ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು' ಎಂದು ಮಜುಂದಾರ್‌ ಆಗ್ರಹಿಸಿದರು.

'ಸರ್ಕಾರದ ವಿರುದ್ಧ ಪ್ರತಿಭಟಿಸಲು ಮುಂದಾದಾಗಲೆಲ್ಲಾ ನನ್ನನ್ನು ಬಂಧಿಸಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಈ ರೀತಿ ನಾಲ್ಕು ಬಾರಿ ನಡದಿದೆ' ಎಂದು ಲಾಕಪ್‌ನಲ್ಲಿದ್ದಾಗಲೇ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಕೇಂದ್ರ ಸಚಿವರು ತಿಳಿಸಿದ್ದಾರೆ.

ಬಿಜೆಪಿಯಿಂದ ಜಾಮೀನು ನಿರಾಕರಣೆ ಆಂದೋಲನ ಪಶ್ಚಿಮ ಬಂಗಾಳದ ವಿವಿಧೆಡೆ ವಿಪಕ್ಷಗಳ ಪ್ರತಿಭಟನೆ | ಮುಖ್ಯಮಂತ್ರಿ ವಿರುದ್ಧ ಮಜುಂದಾರ್‌ ವಾಗ್ದಾಳಿಸುಕಾಂತ ಮಜುಂದಾರ್ ಕೇಂದ್ರ ಸಚಿವ ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿ ಇದ್ದರೂ ಮಹಿಳೆಯರ ಮೇಲೆ ದೌರ್ಜನ್ಯದ ಘಟನೆಗಳು ನಿರ್ಭಯದಿಂದ ನಡೆಯುತ್ತಿವೆಧರ್ಮೇಂದ್ರ ಪ್ರಧಾನ್‌ ಕೇಂದ್ರ ಸಚಿವಟಿಎಂಸಿಯ ಗೂಂಡಾಗಳು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅತ್ಯಾಚಾರದಿಂದ 'ರಾಷ್ಟ್ರದ ಆತ್ಮಸಾಕ್ಷಿ'ಗೆ ಆಘಾತವಾಗಿದೆ

ಶಾಸಕನಿಗೆ ಶೋಕಾಸ್‌ ನೋಟಿಸ್‌

ಸಾಮೂಹಿಕ ಅತ್ಯಾಚಾರದ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಶಾಸಕ ಮದನ್‌ ಮಿತ್ರಾ ಅವರಿಗೆ ತೃಣಮೂಲ ಕಾಂಗ್ರೆಸ್‌ ಭಾನುವಾರ ಶೋಕಾಸ್‌ ನೋಟಿಸ್‌ ನೀಡಿದೆ. 'ಪಕ್ಷದ ನಿಯಮಗಳನ್ನು ಉಲ್ಲಂಘಿಸಿ ಹೇಳಿಕೆ ನೀಡಿದ್ದೀರಿ. ಮೂರು ದಿನಗಳಲ್ಲಿ ಉತ್ತರಿಸಿ' ಎಂದು ಟಿಎಂಸಿ ರಾಜ್ಯ ಘಟಕದ ಅಧ್ಯಕ್ಷ ಸುಬ್ರತಾ ಭಕ್ಷಿ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. 'ಆಕ್ಷೇಪಾರ್ಹ ಹಾಗೂ ಸಂವೇದನಾರಹಿತವಾದ ನಿಮ್ಮ ಹೇಳಿಕೆಗಳು ಪಕ್ಷದ ವರ್ಚಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ' ಎಂದೂ ತಿಳಿಸಿದ್ದಾರೆ. 'ವಿದ್ಯಾರ್ಥಿನಿಯು ಒಬ್ಬಂಟಿಯಾಗಿ ಕಾಲೇಜಿಗೆ ಹೋಗದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಅಲ್ಲಿಗೆ ಹೋಗುವಾಗ ತನ್ನೊಟ್ಟಿಗೆ ಸ್ನೇಹಿತರನ್ನು ಕರೆದೊಯ್ಯಬೇಕಿತ್ತು ಅಥವಾ ಪರಿಚಯದವರಿಗೆ ತಿಳಿಸಬೇಕಿತ್ತು' ಎಂದು ಮದನ್‌ ಮಿತ್ರಾ ಶನಿವಾರ ಹೇಳಿದ್ದರು. 'ಕಾಲೇಜು ಮುಚ್ಚಿದ್ದಾಗ ಯಾರಾದರೂ ನಿಮಗೆ ಕರೆ ಮಾಡಿ ಕರೆದರೆ ನೀವು ಅಲ್ಲಿಗೆ ಹೋಗದಿರಿ. ಒಂದು ವೇಳೆ ಹೋದರೂ ಒಳ್ಳೆಯದಾಗುವುದಿಲ್ಲ ಎಂದು ಈ ಘಟನೆಯು ವಿದ್ಯಾರ್ಥಿನಿಯರಿಗೆ ಸಂದೇಶವೊಂದನ್ನು ನೀಡಿದೆ. ಆ ಹುಡುಗಿ ಅಲ್ಲಿಗೆ ಹೋಗದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ' ಎಂದಿದ್ದರು. ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ ಮರುದಿನ ಮಿತ್ರಾ ಸಹ ಸಂವೇದನಾರಹಿತ ಮಾತುಗಳನ್ನಾಡಿದ್ದರು. ಈ ಇಬ್ಬರ ಹೇಳಿಕೆಗಳಿಂದಲೂ ಟಿಎಂಸಿಯು ಅಂತರ ಕಾಯ್ದುಕೊಂಡಿದೆ.

ಮಹಿಳಾ ಆಯೋಗದ ಸದಸ್ಯೆ ಭೇಟಿ

ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಸದಸ್ಯೆ ಅರ್ಚನಾ ಮಜುಂದಾರ್‌ ಅವರು ಅತ್ಯಾಚಾರ ನಡೆದ ಕಾನೂನು ಕಾಲೇಜಿಗೆ ಭಾನುವಾರ ಭೇಟಿ ನೀಡಿದರು. 'ಘಟನೆಗೆ ಸಂಬಂಧಿಸಿದ ವಿವರಗಳನ್ನು ಪೊಲೀಸರು ಒದಗಿಸಿಲ್ಲ' ಎಂದು ದೂರಿದ ಅವರು 'ಸಂತ್ರಸ್ತೆಯ ಜೊತೆ ಆಯೋಗವಿದೆ. ಅಗತ್ಯವಿರುವ ನೆರವು ನೀಡಲಿದೆ. ಆಕೆಯ ತಂದೆ- ತಾಯಿಯೊಂದಿಗೂ ಮಾತನಾಡಲಿದೆ. ಇದು ಆಯೋಗದ ವಿಚಾರಣೆಯ ಭಾಗವೂ ಆಗಿರಲಿದೆ' ಎಂದು ಹೇಳಿದರು. 'ನನ್ನ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂಬುದಾಗಿ ವರದಿ ನೀಡುವೆ' ಎಂದು ಅರ್ಚನಾ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries