ನವದೆಹಲಿ: ಸಮಗ್ರ ಶಿಕ್ಷಣ ಯೋಜನೆಯ 2024-25ನೇ ಸಾಲಿನ ₹ 2,151 ಕೋಟಿ ಶೈಕ್ಷಣಿಕ ಅನುದಾನವನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನ್‌ಮೋಹನ್ ಅವರು ಇದ್ದ ಪೀಠವು ಮೇನಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ , 'ತುರ್ತು ವಿಚಾರಣೆ ಅಗತ್ಯ ಇಲ್ಲ. ಬೇಸಿಗೆ ರಜೆ ಕಾಲದ ನಂತರವೂ ವಿಚಾರಣೆ ನಡೆಸಬಹುದು' ಎಂದು ಹೇಳಿದೆ.
ತ್ರಿಭಾಷಾ ಸೂತ್ರ ಜಾರಿಯ ಉದ್ದೇಶ ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ( ಎನ್‌ಇಪಿ), ಪಿಎಂಶ್ರೀ ಶಾಲಾ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಒತ್ತಡ ಹೇರಿತ್ತು. ಇದನ್ನು ವಿರೋಧಿಸಿದ್ದಕ್ಕೆ ಅನುದಾನ ತಡೆ ಹಿಡಿದಿದೆ ಎಂದು ಅರ್ಜಿಯಲ್ಲಿ ತಮಿಳುನಾಡು ಸರ್ಕಾರ ಆರೋಪಿಸಿತ್ತು.
2020ರಲ್ಲಿ ಎನ್‌ಇಪಿ ಜಾರಿ ಮಾಡಿಲ್ಲ, ಪಿಎಂಶ್ರೀ ಯೋಜನೆ ಅನುಷ್ಠಾನ ಮಾಡಿಲ್ಲ ಎಂಬ ವಿಚಾರಕ್ಕೂ ಸಮಗ್ರ ಶಿಕ್ಷಣ ಯೋಜನೆ ಅನುದಾನಕ್ಕೂ ಸಂಬಂಧ ಕಲ್ಪಿಸಿರುವುದು ಸರಿಯೇ..? ಈ ಬಗ್ಗೆ ಕೇಂದ್ರ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಮಿಳುನಾಡು ವಾದಿಸಿತ್ತು.
ಈ ಸಂಬಂಧ ಕೇಂದ್ರ ಬರೆದಿದ್ದ ಎರಡು ಪತ್ರಗಳನ್ನು ಕಾನೂನು ಬಾಹಿರ, ಅನೂರ್ಜಿತ ಮತ್ತು ರಾಜ್ಯ ಸರ್ಕಾರ ಪಾಲಿಸಬೇಕೆಂದೇನೂ ಇಲ್ಲ ಎಂದು ಪರಿಗಣಿಸಬೇಕು. ಶೇಕಡ 6ರಷ್ಟು ಬಡ್ಡಿ ಸೇರಿಸಿ ₹2,291 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಕೋರಿತ್ತು.
ಕೇಂದ್ರ ಶಿಕ್ಷಣ ಇಲಾಖೆಯ ಯೋಜನಾ ಅನುಮೋದನೆ ಮಂಡಳಿ ತಮಿಳುನಾಡಿಗೆ 2024-25ರಲ್ಲಿ ₹3,585 ಕೋಟಿ ಬಿಡುಗಡೆಗೆ ಮಂಜೂರಾತಿ ನೀಡಿತ್ತು. ಕೇಂದ್ರ ಸರ್ಕಾರ ಶೇಕಡಾ 60ರಷ್ಟು (₹2,151 ಕೋಟಿ) ಹಣ ನೀಡಬೇಕಿತ್ತು. ಕೇಂದ್ರ ಹಣ ಬಿಡುಗಡೆ ಮಾಡದೇ ಇರುವುದರಿಂದ ಶಿಕ್ಷಣ ಇಲಾಖೆಯಲ್ಲಿ ವೇತನ ನೀಡಲು ಆಗುತ್ತಿಲ್ಲ ಎಂದೂ ತಮಿಳುನಾಡು ಅರ್ಜಿಯಲ್ಲಿ ಉಲ್ಲೇಖಿಸಿದೆ.




