ನವದೆಹಲಿ: ಇರಾನ್ ಮತ್ತು ಇಸ್ರೇಲ್ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಭಾರತೀಯ ರಾಯಭಾರ ಕಚೇರಿ ಮಾಡಿರುವ ವ್ಯವಸ್ಥೆಯನ್ನು ಬಳಸಿಕೊಂಡು ಭಾರತದ ವಿದ್ಯಾರ್ಥಿಗಳು ಟೆಹರಾನ್ ಅನ್ನು ತೊರೆದಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸಾಧ್ಯವಿರುವ ಎಲ್ಲ ಸಹಕಾರ ನೀಡಲು ಇರಾನ್‌ನಲ್ಲಿರುವ ಭಾರತೀಯರ ಜೊತೆ ರಾಯಭಾರ ಕಚೇರಿ ಸಂಪರ್ಕದಲ್ಲಿ ಇರುತ್ತದೆ ಎಂದೂ ಅದು ತಿಳಿಸಿದೆ.
ಸ್ವಂತ ವಾಹನಗಳನ್ನು ಹೊಂದಿರುವ ನಿವಾಸಿಗಳು ಸಹ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಗರದಿಂದ ಹೊರಗೆ ಹೋಗಲು ಸೂಚಿಸಲಾಗಿದೆ ಎಂದು ಅದು ಹೇಳಿದೆ.
ಕೆಲವು ಭಾರತೀಯರಿಗೆ ಅರ್ಮೇನಿಯಾದ ಗಡಿಯ ಮೂಲಕ ಇರಾನ್‌ನಿಂದ ಹೊರಹೋಗಲು ಅನುಕೂಲ ಮಾಡಿಕೊಡಲಾಗಿದೆ ಎಂದು ಎಂಇಎ ತಿಳಿಸಿದೆ.
ಇರಾನ್ ಮತ್ತು ಇಸ್ರೇಲ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯದಲ್ಲಿ 24x7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ನಿಯಂತ್ರಣ ಕೊಠಡಿಯ ಸಂಪರ್ಕದ ವಿವರಗಳು ಈ ಕೆಳಗಿನಂತಿವೆ:
1800118797 (ಟೋಲ್-ಫ್ರೀ), +91-11-23012113, +91-11-23014104, +91-11-23017905 +91-9968291988 (ವಾಟ್ಸ್‌ಆಯಪ್) ಮತ್ತು situationroom@mea.gov.inಗೆ ಮೇಲ್ ಮಾಡಬಹುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಇದಲ್ಲದೆ, ಟೆಹರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು 24x7 ತುರ್ತು ಸಹಾಯವಾಣಿಯನ್ನು ಸ್ಥಾಪಿಸಿದೆ.
ಟೆಹರಾನ್‌ನ ತುರ್ತು ಸಹಾಯವಾಣಿ ಸಂಖ್ಯೆ: +98 9128109115, +98 9128109109; ವಾಟ್ಸ್‌ಆಯಪ್ ಸಂಖ್ಯೆ: +98 901044557, +98 9015993320, +91 8086871709, ಬಂದರ್ ಅಬ್ಬಾಸ್: +98 9177699036, ಜಹೇದನ್: +98 9396356649 ಸಂಖ್ಯೆಗೂ ಸಂಪರ್ಕಿಸಬಹುದು ಎಂದು ಅದು ತಿಳಿಸಿದೆ.
ಶುಕ್ರವಾರ ಮುಂಜಾನೆ ಇರಾನ್‌ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮಾಡಿತ್ತು. ನಂತರ ಇರಾನ್, ಇಸ್ರೇಲ್ ಮೇಲೆ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿತ್ತು.

