ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮೇಲೆ ನಡೆಸಿರುವ 'ಆಪರೇಷರ್ ಸಿಂಧೂರ' ಕಾರ್ಯಾಚರಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಪ್ರಧಾನಿ ನರೇಂದ್ರ ಮೋದಿ ಸ್ವಯಂ ಹೊಗಳಿಕೆಯ ಬದಲು ಶತ್ರುಗಳ ಮೇಲೆ ಗಮನ ಹರಿಸಬೇಕು' ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೋದಿ ಭಾಷಣಗಳ ಕುರಿತು ಪ್ರತಿಕ್ರಿಯೆ ನೀಡಲು ನಾನು ಇಚ್ಚಿಸುವುದಿಲ್ಲ. ಆದರೆ ನನ್ನ ಒಂದೇ ವಿನಂತಿ ಏನೆಂದರೆ ಅಧಿಕಾರದಲ್ಲಿರುವವರು ಕೆಲವೊಮ್ಮೆ ಸುಮ್ಮನಿರಬೇಕು' ಎಂದು ಹೇಳಿದ್ದಾರೆ.
ಸಾರ್ವಜನಿಕವಾಗಿ ಪ್ರಧಾನಿಯವರ ಇತ್ತೀಚಿನ ಹೇಳಿಕೆ ಹಾಗೂ ರಾಜಕೀಯ ಚಟುವಟಿಕೆಯ ಕುರಿತು ಖರ್ಗೆ ಪ್ರಶ್ನಿಸಿದ್ದಾರೆ. 'ಮೋದಿ ಚುನಾವಣಾ ಪ್ರಚಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದು ದೇಶದ ಮೇಲೆ ಗಮನ ಹರಿಸಬೇಕು. ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡು ಮಾತನಾಡಬೇಕು' ಎಂದು ಖರ್ಗೆ ಹೇಳಿದ್ದಾರೆ.
'ಮೋದಿ ಹೊರತುಪಡಿಸಿ ಬೇರೆ ಯಾರೂ ಹಾಗೆ ಮಾಡುತ್ತಿರಲಿಲ್ಲ. ಪ್ರಧಾನಿ ಶತ್ರುಗಳ ಮೇಲೆ ಗಮನ ಹರಿಸಬೇಕು. ನಮ್ಮೆಲ್ಲ ಬೆಂಬಲ ಸಶಸ್ತ್ರ ಪಡೆಗಳೊಂದಿಗೆ ಇದೆ' ಎಂದು ಖರ್ಗೆ ತಿಳಿಸಿದ್ದಾರೆ.
'ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಹಾಗಿರುವಾಗ ಎಲ್ಲವನ್ನು ತಾನೇ ಮಾಡಿದ್ದೇನೆ ಎಂದು ಏಕೆ ಹೇಳಿಕೊಳ್ಳುತ್ತಾರೆ? ಆತ್ಮಸ್ತುತಿ ಒಳ್ಳೆಯದಲ್ಲ' ಎಂದು ಟೀಕಿಸಿದ್ದಾರೆ.




