ದೋಹ: ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕ ಸೂಚಿಸಿದ ಪ್ರಸ್ತಾವನೆಗೆ ಇರಾನಿನ ಅನುಮೋದನೆ ಪಡೆಯುವಲ್ಲಿ ಖತರ್ ನ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಪ್ರಮುಖ ಪಾತ್ರ ನಿರ್ವಹಿಸಿದ್ದರು ಎಂದು ವರದಿಯೊಂದು ತಿಳಿಸಿದೆ.
ಖತರ್ ಪ್ರಧಾನಿಗೆ ಕರೆ ಮಾಡಿದ್ದ ಟ್ರಂಪ್ , ಕದನ ವಿರಾಮ ಪ್ರಸ್ತಾಪವನ್ನು ಇಸ್ರೇಲ್ ಒಪ್ಪಿಕೊಂಡಿದೆ. ಒಪ್ಪಂದಕ್ಕೆ ಇರಾನಿನ ಮನ ಒಲಿಸುವಂತೆ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ರಿಗೆ ಮನವಿ ಮಾಡಿದ್ದರು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಖತರ್ ಮತ್ತು ಇರಾಕ್ ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಸೋಮವಾರ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬಳಿಕ ಈ ಬೆಳವಣಿಗೆ ಸಂಭವಿಸಿರುವುದಾಗಿ ವರದಿಯಾಗಿದೆ.
ಕದನ ವಿರಾಮ ಘೋಷಣೆಯಾದ ಬಳಿಕ ಹೇಳಿಕೆ ನೀಡಿರುವ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಇರಾನಿನ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. `ಇರಾನಿನ ಮೇಲೆ ಯುದ್ಧ ಆರಂಭಿಸಿದ್ದು ಇಸ್ರೇಲ್. ನಾವು ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದೇವೆ. ಇಸ್ರೇಲ್ ದಾಳಿಯನ್ನು ನಿಲ್ಲಿಸಿದರೆ ನಾವು ಕೂಡಾ ನಿಲ್ಲಿಸುತ್ತೇವೆ' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನಿನ ಸಶಸ್ತ್ರ ಪಡೆಗಳ ಕಾರ್ಯವನ್ನು ಶ್ಲಾಘಿಸಿರುವ ಅರಾಗ್ಚಿ, ಅವರು ಕಡೆಯ ಕ್ಷಣದವರೆಗೂ ಹೋರಾಡಿದರು ಮತ್ತು ಕದನ ವಿರಾಮ ಷರತ್ತು ಉಲ್ಲಂಘನೆಯಾದರೆ ಮಾತ್ರ ಪ್ರತಿದಾಳಿ ನಡೆಸುತ್ತಾರೆ ಎಂದಿದ್ದಾರೆ.




