HEALTH TIPS

ಭಾರತೀಯರ ಸರಾಸರಿ ದೈನಂದಿನ ಉಪ್ಪಿನ ಸೇವನೆ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿಗಿಂತ ಎರಡು ಪಟ್ಟು ಹೆಚ್ಚು: ವರದಿ

ನವದೆಹಲಿ: ಭಾರತೀಯ ಆಹಾರ ಪದ್ಧತಿಯಲ್ಲಿ ಮನೆ ಊಟಗಳು ಪ್ರಮುಖವಾಗಿದ್ದು, ಇವು ನಾವು ಸೇವಿಸುವ ಉಪ್ಪಿನ ಶೇ.80ರಷ್ಟನ್ನು ಒದಗಿಸುತ್ತವೆ. ಸಾಂಸ್ಕೃತಿಕ ಪದ್ಧತಿಗಳು ಮತ್ತು ಆಹಾರ ಆದ್ಯತೆಗಳು,ವಿಶೇಷವಾಗಿ ಉತ್ತರದ ರಾಜ್ಯಗಳಲ್ಲಿ,ಸರಾಸರಿ ದೈನಂದಿನ ಉಪ್ಪು ಸೇವನೆಯು 12 ಗ್ರಾಮ್‌ಗಿಂತ ಹೆಚ್ಚಾಗಲು ಕಾರಣವಾಗಿದೆ.

ಇದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿರುವ ಐದು ಗ್ರಾಮ್(ಸುಮಾರು ಒಂದು ಟೀ ಚಮಚ)ಗೂ ಕಡಿಮೆ ಮಿತಿಯ ದುಪ್ಪಟ್ಟಿಗೂ ಅಧಿಕವಾಗಿದೆ ಎಂದು Times of India ವರದಿ ಮಾಡಿದೆ.

ಉಪ್ಪಿನ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಉಪ್ಪು ಸೇವನೆಯು ರಕ್ತದೊತ್ತಡ ಹೆಚ್ಚಾಗಲು ಪ್ರಮುಖ ಕಾರಣವಾಗಿದ್ದು,ಇದು ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆತಂಕಕಾರಿಯಾಗಿ ಭಾರತದಲ್ಲಿ ವಾರ್ಷಿಕ ಸುಮಾರು 1,75,000 ಸಾವುಗಳು ಹೆಚ್ಚಿನ ಉಪ್ಪು ಸೇವನೆಯಿಂದಾಗಿ ಅಧಿಕ ರಕ್ತದೊತ್ತಡದಿಂದಲೇ ಸಂಭವಿಸುತ್ತವೆ.

ಆರೋಗ್ಯಕರ ಆಹಾರ ಪದ್ಧತಿ ಮತ್ತು ಉಪ್ಪು ಸೇವನೆ ಕಡಿತ ತಂತ್ರಗಳ ಮೂಲಕ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಹೊಂದಿರುವ 'ರಿಸಾಲ್ವ್ ಟು ಸೇವ್ ಲೈವ್ಸ್' ಮಂಗಳವಾರ ಇಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರವು ಈ ವಿಷಯಗಳನ್ನು ಎತ್ತಿ ತೋರಿಸಿದೆ.

ದೈನಂದಿನ ಉಪ್ಪು ಸೇವನೆಯ ಶೇ.80ರಷ್ಟನ್ನು ಮನೆ ಆಹಾರ ಅಥವಾ ಟೇಬಲ್ ಸಾಲ್ಟ್ ಪೂರೈಸುತ್ತದೆ. ಉಪ್ಪಿನಕಾಯಿ, ಹಪ್ಪಳ, ಚಟ್ನಿ, ಸಲಾಡ್ ಮತ್ತು ಮಜ್ಜಿಗೆಯಂತಹ ಸಾಮಾನ್ಯ ಆಹಾರಗಳು ದೈನಂದಿನ ಉಪ್ಪು ಸೇವನೆಗೆ ಗಮನಾರ್ಹ ಕೊಡುಗೆ ನೀಡುತ್ತವೆ. ಉಳಿದ ಉಪ್ಪು ರೆಸ್ಟೋರಂಟ್ ಊಟ, ಬೀದಿಬದಿ ಆಹಾರ ಮತ್ತು ಪ್ಯಾಕ್ ಮಾಡಲಾದ ಉತ್ಪನ್ನಗಳ ಮೂಲಕ ದೇಹವನ್ನು ಸೇರುತ್ತದೆ.ಬಿಸ್ಕಿಟ್‌ಗಳು, ಸಾಸ್‌ಗಳು,ಕಾಂಡಿಮೆಂಟ್‌ಗಳು ಮತ್ತು ತಿಂಡಿಗಳಂತಹ ಪ್ಯಾಕ್ ಮಾಡಲಾದ ಉತ್ಪನ್ನಗಳಲ್ಲಿ ಅಡಗಿರುವ ಲವಣಗಳೂ ಅತಿಯಾದ ಸೋಡಿಯಮ್ ಸೇವನೆಯಲ್ಲಿ ಗಣನೀಯ ಪಾತ್ರವನ್ನು ಹೊಂದಿವೆ ಎಂದು ಹೇಳಿದ ದಿಲ್ಲಿಯ ಮ್ಯಾಕ್ಸ್‌ಕೇರ್‌ನ ಮುಖ್ಯ ಕ್ಲಿನಿಕಲ್ ಆಹಾರ ತಜ್ಞೆ ಡಾ.ರಿತಿಕಾ ಸಮದರ್ ಅವರು, ಗುಲಾಬಿ ಉಪ್ಪು, ಕಲ್ಲುಪ್ಪು, ಸಮುದ್ರ ಉಪ್ಪು ಮತ್ತು ಸಾಮಾನ್ಯ ಬಿಳಿಯ ಉಪ್ಪುಗಳಲ್ಲಿ ಸೋಡಿಯಂ ಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಅಯೋಡೈಸ್ಡ್ ಉಪ್ಪಿನ ಬಳಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.

ಭಾರತವು 2030ರ ವೇಳೆಗೆ ಸರಾಸರಿ ಉಪ್ಪು ಸೇವನೆಯನ್ನು ಶೇ.30ರಷ್ಟು ತಗ್ಗಿಸುವ ಗುರಿಯನ್ನು ಹೊಂದಿದ್ದು,ತನ್ನ 2025ರ ಹಿಂದಿನ ಯೋಜನೆಯನ್ನು ಡಬ್ಲ್ಯುಎಚ್‌ಒದ ಎನ್‌ಸಿಡಿ ಕ್ರಿಯಾ ಯೋಜನೆಗೆ ಅನುಗುಣವಾಗಿ ಪರಿಷ್ಕರಿಸಿದೆ. ಈ ಬದ್ಧತೆಯು ಸಾಂಕ್ರಾಮಿಕವಲ್ಲದ ರೋಗಗಳ(ಎನ್‌ಸಿಡಿ) ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಬಹುವಲಯ ಕ್ರಿಯಾ ಯೋಜನೆಯ ಭಾಗವಾಗಿದೆ. ಆದರೂ ಸಮಗ್ರ ರಾಷ್ಟ್ರೀಯ ಉಪ್ಪು ಸೇವನೆ ಕಡಿತ ಕಾರ್ಯತಂತ್ರದ ಅನುಪಸ್ಥಿತಿ,ದುರ್ಬಲ ನಿಯಂತ್ರಕ ಚೌಕಟ್ಟುಗಳು ಮತ್ತು ಅತಿಯಾದ ಉಪ್ಪು ಸೇವನೆಯ ಕುರಿತು ಸಾರ್ವಜನಿಕ ಅರಿವಿನ ಕೊರತೆ ಸೇರಿದಂತೆ ಹಲವಾರು ಗಮನಾರ್ಹ ಸವಾಲುಗಳು ಹಾಗೆಯೇ ಉಳಿದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries