HEALTH TIPS

ಕೋಯಿಕ್ಕೋಡ್ ವಿಮಾನ ಅಪಘಾತ; ಇನ್ನೂ ಶಮನವಾಗದ ಆಘಾತ

ತಿರುವನಂತಪುರ: ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಗುರುವಾರ ಪತನಗೊಂಡು, ಪ್ರಯಾಣಿಕರು ಮೃತಪಟ್ಟಿರುವ ಈ ವೇಳೆ, 2020ರಲ್ಲಿ ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ಅಪಘಾತವನ್ನು ಕೆಲವರು ನೆನಪಿಸಿಕೊಂಡಿದ್ದಾರೆ.

ಈ ಅಪಘಾತದಲ್ಲಿ ಗಾಯಗೊಂಡು, ಅಂಗವೈಕಲ್ಯದಿಂದ ಬಳಲುತ್ತಿರುವವರು ಇನ್ನೂ ಪರದಾಡುತ್ತಿದ್ದಾರೆ.

ಅಪಘಾತಕ್ಕೆ ಕಾರಣವಾಗಿದ್ದ ರನ್‌ವೇನಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವ ಕಾರ್ಯ ಕೂಡ ಇನ್ನೂ ಪೂರ್ಣಗೊಂಡಿಲ್ಲ.

2020ರ ಆಗಸ್ಟ್‌ 7ರಂದು, ದುಬೈನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನ(ಐಎಕ್ಸ್‌ 1344) ಕೋಯಿಕ್ಕೋಡ್‌ ವಿಮಾನ ನಿಲ್ಧಾಣದಲ್ಲಿ ಇಳಿಯುವ ವೇಳೆ, ರನ್‌ವೇ ದಾಟಿ ಮುಂದೆ ಸಾಗಿ ಬಿದ್ದಿತ್ತು.

ಕೋವಿಡ್‌-19ನಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವುದಕ್ಕಾಗಿ ಆರಂಭಿಸಿದ್ದ 'ವಂದೇ ಭಾರತ' ಕಾರ್ಯಕ್ರಮದ ಭಾಗವಾಗಿ ಈ ವಿಮಾನ ನಿಯೋಜನೆಗೊಂಡಿತ್ತು. ಇಬ್ಬರು ಪೈಲಟ್‌ ಸೇರಿ 21 ಜನರು ಮೃತಪಟ್ಟಿದ್ದರು ಹಾಗೂ ಸಿಬ್ಬಂದಿ ಸೇರಿ 165 ಮಂದಿ ಗಾಯಗೊಂಡಿದ್ದರು.

'ನಾನು ಈಗ ನಡೆದಾಡಬಲ್ಲೆ. ಹೀಗಾಗಿ ನಾನು ಅದೃಷ್ಟವಂತ. ಇತರ ಹಲವರಂತೆ ನನ್ನ ಪತ್ನಿ ಇನ್ನೂ ಗಾಲಿಕುರ್ಚಿ ಅವಲಂಬಿಸಿದ್ದಾಳೆ. ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ನಂತರವೂ ಮಹಿಳೆಯೊಬ್ಬರು ಇನ್ನೂ ಹಾಸಿಗೆಯಲ್ಲಿದ್ದಾರೆ' ಎಂದು ಈ ಅಪಘಾತದಲ್ಲಿ ಬದುಕುಳಿದಿರುವ ಸೈಫು ಹೇಳುತ್ತಾರೆ.

'ವಿಮಾನ ಅಪಘಾತದಲ್ಲಿ ಬದುಕುಳಿದವರು ಹಾಗೂ ಅವರ ಅವಲಂಬಿತರಿಗೆ ಪರಿಹಾರ ನೀಡಲಾಗಿದೆ. ಹೆಚ್ಚಿನ ಪರಿಹಾರ ಕೋರಿ ಕೆಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. 40 ಪ್ರಯಾಣಿಕರು ಅಂಗವಿಕಲರಾಗಿದ್ದು, ಅವರಿಗೆ ವೈದ್ಯಕೀಯ ನೆರವಿನ ಅಗತ್ಯ ಇದೆ. ಇವರಿಗೆ ಈಗಲೂ ಯಾವುದೇ ನೆರವು ಸಿಗುತ್ತಿಲ್ಲ' ಎಂದು ಅಪಘಾತದಲ್ಲಿ ಬದುಕುಳಿದವರು ಮತ್ತು ಸಂತ್ರಸ್ತರ ಅವಲಂಬಿತರ ಕ್ರಿಯಾ ಮಂಡಳಿಯ ಮುಖ್ಯಸ್ಥ ಅಬ್ದುರಹಿಮಾನ್ ಎಡಕ್ಕುನಿ ಹೇಳುತ್ತಾರೆ.

'ಕೋಯಿಕ್ಕೋಡ್‌ನಲ್ಲಿರುವುದು ಟೇಬಲ್‌ ಟಾಪ್ ವಿಮಾನ ನಿಲ್ದಾಣ. ಹೀಗಾಗಿ ರನ್‌ವೇ ವಿಸ್ತರಣೆಗೆ ಹೆಚ್ಚು ಜಮೀನು ಅಗತ್ಯ. ಇದೇ ಕಾರಣಕ್ಕಾಗಿ ರನ್‌ವೇ ವಿಸ್ತರಣೆ ಕಾರ್ಯ ವಿಳಂಬವಾಗುತ್ತಿರಬಹುದು' ಎಂದು ಸ್ಥಳೀಯ ಶಾಸಕ ಟಿ.ವಿ.ಇಬ್ರಾಹಿಂ ಹೇಳುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries