ನವದೆಹಲಿ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ…ಹೌದು ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಡಬೇಕಾದ ಅಗತ್ಯವಿಲ್ಲ ಎಂದು ಘೋಷಿಸುವ ಮೂಲಕ ಎಲ್ಲಾ ಗ್ರಾಹಕರಿಗೂ ರಿಲೀಫ್ ನೀಡಿದೆ. ಈ ಹೊಸ ನಿಯಮ ಜೂನ್ 1ರಿಂದ ಅನ್ವಯವಾಗಲಿದೆ.
ದೇಶದ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ನ ಐತಿಹಾಸಿಕ ಬೆಳವಣಿಗೆಯಲ್ಲಿ, ಉಳಿತಾಯ ಖಾತೆ (Savings accounts), ಸಂಬಳದ ಖಾತೆ (Salary accounts), ಎನ್ ಆರ್ ಐ ಎಸ್ ಬಿ ಖಾತೆಗಳು ಸೇರಿದಂತೆ ಎಲ್ಲಾ ವಿಧದ ಎಸ್ ಬಿ ಖಾತೆಯಲ್ಲಿ ತಿಂಗಳ ಕನಿಷ್ಠ ಬ್ಯಾಲೆನ್ಸ್ ಇರಬೇಕೆಂಬ ನಿಯಮವನ್ನು ಕೈಬಿಟ್ಟಿರುವುದಾಗಿ ಘೋಷಿಸಿದೆ.
ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ವಿಧಿಸುತ್ತಿದ್ದ ದಂಡವನ್ನೂ ಕೂಡಾ ರದ್ದುಪಡಿಸುವ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಕೆನರಾ ಬ್ಯಾಂಕ್ ಪ್ರಕಟನೆ ತಿಳಿಸಿದೆ.
ಈ ನಿಟ್ಟಿನಲ್ಲಿ ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಖಾತೆಯಲ್ಲಿ ಕನಿಷ್ಠ ಮೊತ್ತ ಹೊಂದಿಲ್ಲದಿದ್ದರೂ ಯಾವುದೇ ದಂಡ ತೆರಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಹಿಂದೆ ಕೆನರಾ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯ ವಿಧದ ಆಧಾರದ ಮೇಲೆ ಸರಾಸರಿ ಮಾಸಿಕ ಬ್ಯಾಲೆನ್ಸ್ ಅನ್ನು (1,000 ರೂ.) ಕಾಯ್ದಿರಿಸಬೇಕಾಗಿತ್ತು. ಒಂದು ವೇಳೆ ಗ್ರಾಹಕರು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡದಿದ್ದಲ್ಲಿ ಅದಕ್ಕೆ ಬ್ಯಾಂಕ್ ದಂಡ ವಿಧಿಸುತ್ತಿತ್ತು. ಆದರೆ ಇದೀಗ ಕೆನರಾ ಬ್ಯಾಂಕ್ ನ ಹೊಸ ನಿಯಮದಿಂದ ಗ್ರಾಹಕರು ಇನ್ಮುಂದೆ ಮಿನಿಮಮ್ ಬ್ಯಾಲೆನ್ಸ್ ಇಡಬೇಕಾದ ಅಗತ್ಯವಿಲ್ಲ.




