ತಿರುವನಂತಪುರ: ಈ ವರ್ಷ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಲಯೊನೆಲ್ ಮೆಸ್ಸಿ ನೇತೃತ್ವದ ಅರ್ಜಿಂಟೀನಾ ರಾಷ್ಟ್ರೀಯ ಫುಟ್‌ಬಾಲ್ ತಂಡ ಕೇರಳಕ್ಕೆ ಆಗಮಿಸಲಿದೆ ಎಂದು ಕೇರಳ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ತಿಳಿಸಿದ್ದಾರೆ.
ಒಪ್ಪಂದದ ನಿಯಮಗಳನ್ನು ಪ್ರಾಯೋಜಕರು ಉಲ್ಲಂಘಿಸಿದ್ದರಿಂದ ಕೇರಳದಲ್ಲಿ ಪ್ರದರ್ಶನ ಪಂದ್ಯ ಆಡುವುದನ್ನು ಅರ್ಜೇಂಟೀನಾ ತಂಡ ರದ್ದುಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ ತಿಂಗಳುಗಳ ನಂತರ ಕ್ರೀಡಾ ಸಚಿವರಿಂದ ಈ ಹೇಳಿಕೆ ಹೊರ ಬಿದ್ದಿದೆ.
'ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಅರ್ಜೇಂಟೀನಾ ತಂಡ ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ. ಅವರನ್ನು ರಾಜ್ಯದ ಅತಿಥಿಗಳೆಂದು ಪರಿಗಣಿಸಿ, ಅವರ ಭದ್ರತೆ, ವಸತಿ ಮತ್ತು ಇತರ ಸೌಲಭ್ಯಗಳನ್ನು ಸರ್ಕಾರವೇ ಪೂರೈಸಲಿದೆ' ಎಂದು ಸಚಿವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಇದೇ ವೇಳೆ, ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿರುವ ರಿಪೋರ್ಟರ್ ಬ್ರಾಡ್‌ಕಾಸ್ಟಿಂಗ್ ಕಂಪನಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 'ಪ್ರಾಯೋಜಕರು ಈಗ ಮೊತ್ತವನ್ನು ಪಾವತಿಸಿದ್ದಾರೆ. ಈ ವಿಷಯದಲ್ಲಿ ಬೇರೆ ಯಾವುದೇ ಅಡೆತಡೆಗಳಿಲ್ಲ' ಎಂದಿದ್ದಾರೆ.
'ಪಂದ್ಯಕ್ಕೂ ಮುನ್ನ ಪಾವತಿಸಬೇಕಾದ ಮೊತ್ತವನ್ನು ಪ್ರಾಯೋಜಕರು ಇತ್ಯರ್ಥಪಡಿಸಿದ್ದಾರೆ. ಹಣಕಾಸಿನ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ವಿಶ್ವ ಚಾಂಪಿಯನ್‌ಗಳನ್ನು ಕರೆತರುವ ಮೂಲಕ ರಾಜ್ಯ ಕ್ರೀಡಾ ಕ್ಷೇತ್ರದಲ್ಲಿ ಹೊಸ ಭರವಸೆಗಳನ್ನು ಹುಟ್ಟುಹಾಕುವುದು ಸರ್ಕಾರದ ಏಕೈಕ ಉದ್ದೇಶವಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
2011ರಲ್ಲಿ ವೆನೆಜುವೆಲಾ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮೆಸ್ಸಿ ಅವರು ಅರ್ಜೆಂಟೀನಾ ತಂಡದೊಡನೆ ಮೊದಲ ಬಾರಿ ಭಾರತಕ್ಕೆ ಬಂದಿದ್ದರು. ಕೋಲ್ಕತ್ತದ ಸಾಲ್ಟ್ ಲೇಕ್‌ನಲ್ಲಿ ನಡೆದ ಪಂದ್ಯವನ್ನು ಅರ್ಜೆಂಟೀನಾ 1-0ಯಿಂದ ಗೆದ್ದುಕೊಂಡಿತ್ತು.




