ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಹಾಗೂ ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಪಟಳ ಅತಿಯಾಗಿದ್ದು ನಾಗರಿಕರು ಆತಂಕದಲ್ಲಿದ್ದಾರೆ. ಕೇರಳದಾದ್ಯಂತ ಬೀದಿನಾಯಿಗಳ ಕಡಿತ ಮತ್ತು ರೇಬೀಸ್ ಪ್ರಕರಣಗಳು, ಸಾವುಗಳು ವರದಿಯಾಗುತ್ತಿರುವ ಮಧ್ಯೆ ಜಿಲ್ಲೆಯ ಹಲವೆರಡೆ ಬೀದಿನಾಯಿಗಳ ಕಾಟ ಜನರನ್ನು ಆತಂಕಕ್ಕೀಡುಮಾಡಿದೆ.
7ನೇ ತರಗತಿ ತನಕ ಕನ್ನಡ ಹಾಗೂ ಮಲಯಾಳ ತರಗತಿಗಳಿಗೆ ನಿತ್ಯ ಅನೇಕ ಮಂದಿ ವಿದ್ಯಾರ್ಥಿಗಳು ಕುಂಟಿಕಾನ ಹಿರಿಯ ಬುನಾದಿ ಶಾಲೆಗೆ ಆಗಮಿಸುತ್ತಿದ್ದಾರೆ. ಮಕ್ಕಳು ನಡೆದು ಆಗಮಿಸುವ ವೇಳೆ ಶ್ವಾನಪಡೆ ಬೆದರಿಸಿದ ಘಟನೆಗಳೂ ಇವೆ. ದ್ವಿಚಕ್ರ ಸವಾರರ ಹಿಂದಿನಿಂದ ನಾಯಿಗಳು ಅಟ್ಟಾಡಿಸಿಕೊಂಡೂ ಬರುತ್ತಿದೆ. ರಾತ್ರಿ ವೇಳೆಯಲ್ಲಿ ಸಮೀಪದ ಮನೆಗಳಿಗೆ ತೆರಳಿ ಜಗಲಿ ಹಾಗೂ ಇನ್ನಿತರ ಪ್ರದೇಶಗಳನ್ನು ಮಲಿನಗೊಳಿಸುತ್ತಿರುವುದು, ಕಸಿದು ಕೊಂಡೊಯ್ಯುವ ಬಗ್ಗೆ ದೂರುಗಳಿವೆ.
ಮನೆಮಂದಿಯ ಚಪ್ಪಲಿ, ಬಟ್ಟೆಬರೆಗಳನ್ನು ಎಲ್ಲಿಗಾದರೂ ಎತ್ತಿ ಹಾನಿಗೊಳಿಸುತ್ತಿದ್ದು, ಒಟ್ಟಿನಲ್ಲಿ ಇಡೀ ಊರಿಗೇ ನಾಯಿಗಳ ಉಪಟಳ ಜೋರಾಗಿದೆ. ಶಾಲೆಗೆ ತೆರಳುವ ಮಕ್ಕಳನ್ನು ನಾಯಿಗಳು ಹಿಂಬಾಲಿಸುತ್ತಿರುವುದೂ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇಂತಹ ತಿರುಗಾಡಿ ನಾಯಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಹೇಳುತ್ತಿದ್ದಾರೆ. ಶಾಲಾ ಪರಿಸರದಲ್ಲಿಯೂ ತಿರುಗಾಡುವ ನಾಯಿಗಳಿಂದ ಮಕ್ಕಳು ಅಂಗಳದಲ್ಲಿ ಆಟ ಆಡಲೂ ಹಿಂಜರಿಯುವಂತಾಗಿದೆ.

.jpg)
