ಅರುಣಾಚಲ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದ್ದು ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.
ಚೀನಾ ಗಡಿಯಲ್ಲಿರುವ ಅಂಜ್ವಾ ಜಿಲ್ಲೆಯಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದ ಹಳ್ಳವೊಂದರ ಮರದ ಹಲಗೆಯ ತೂಗು ಸೇತುವೆಯ ಮೇಲೆ ಯುವಕನೊಬ್ಬ ಸಾಹಸ ಮಾಡಲು ಹೋಗಿ ಪ್ರಾಣಾಪಾಯ ತಂದುಕೊಂಡಿದ್ದ ಘಟನೆ ನಡೆದಿದೆ.
ಈ ವಿಡಿಯೊ ನೋಡುಗರನ್ನು ಬೆಚ್ಚಿ ಬೀಳಿಸಿದ್ದು, ಅರುಣಾಚಲ ಸಂಸದ ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ವಿಡಿಯೊ ಹಂಚಿಕೊಂಡಿದ್ದಾರೆ. ಭಾರಿ ಮಳೆಯಾಗುತ್ತಿದೆ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದ್ದಾರೆ.
ಮೇ 29ರಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಅರುಣಾಚಲ ಪ್ರದೇಶವೊಂದರಲ್ಲಿ 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಮೃತರಿಗೆ ರಾಜ್ಯ ಸರ್ಕಾರದಿಂದ ತಲಾ ₹4 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಪೆಮಾ ಖಂಡು ಹೇಳಿದ್ದಾರೆ.
https://twitter.com/i/status/1929241222691832112
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಸಿಕ್ಕಿಂ, ತ್ರಿಪುರಾ ಮತ್ತು ಮಣಿಪುರದಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಪರಿಸ್ಥಿತಿ ಮುಂದುವರಿದಿದ್ದು, ಜನಜೀವನ ತತ್ತರಿಸಿದೆ. ಮಳೆ ಸಂಬಂಧಿ ಅವಘಡಗಳಿಂದ ಕಳೆದ ಎರಡು ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿದೆ.
ಅಸ್ಸಾಂನಲ್ಲಿ ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ ಪ್ರಮುಖ 10 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 15 ಜಿಲ್ಲೆಗಳಲ್ಲಿ 78 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಮತ್ತು ಭೂ ಕುಸಿತದ ಪರಿಣಾಮ ರಸ್ತೆ, ರೈಲು ಮತ್ತು ದೋಣಿ ಸಂಚಾರದಲ್ಲಿ ವ್ಯತ್ಯಯಗಳು ಉಂಟಾಗಿವೆ.




