ಚಂಡೀಗಢ: ಹರಿಯಾಣ ಮೂಲದ ಯುಟ್ಯೂಬರ್ ಜ್ಯೋತಿ ಮಲ್ಹೋತ್ರಾ ಜತೆಗೆ ಸಂಪರ್ಕದಲ್ಲಿದ್ದ ಪಂಜಾಬ್‌ನ ಯುಟ್ಯೂಬರ್ ಒಬ್ಬರನ್ನು ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿದ್ದ ಆರೋಪದಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಜಸ್ಬೀರ್ ಸಿಂಗ್ ಬಂಧಿತ ಆರೋಪಿ. ಇವರು ರುಪಾನಗರ್ ಜಿಲ್ಲೆಯ ಮಹ್ಲಾನ್ ಗ್ರಾಮದವರಾಗಿದ್ದು, 'ಜನ್ ಮಹಲ್' ಎನ್ನುವ ಯುಟ್ಯೂಬ್ ಚಾನೆಲ್ ಹೊಂದಿದ್ದಾರೆ.
ಜಸ್ಬೀರ್, ಪಾಕಿಸ್ತಾನಿ ಗುಪ್ತಚರ ಆಪರೇಟಿವ್ ಜತೆ ಸಂಬಂಧ ಹೊಂದಿರುವುದು ಕಂಡುಬಂದಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.
ಜಸ್ಬೀರ್, ಭಾರತ ಇತ್ತೀಚೆಗೆ ಹೊರಹಾಕಿರುವ ಪಾಕಿಸ್ತಾನ ಹೈಕಮಿಷನ್ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಜೊತೆಗೂ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಶರು ತಿಳಿಸಿದ್ದಾರೆ.
ತನಿಖೆಯ ವೇಳೆ ಜಸ್ಬೀರ್, ಡ್ಯಾನಿಶ್ ಆಹ್ವಾನದ ಮೇರೆಗೆ ದೆಹಲಿಯಲ್ಲಿ ನಡೆದಿದ್ದ ಪಾಕಿಸ್ತಾನ ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ಅವರು ಪಾಕಿಸ್ತಾನ ವ್ಲಾಗರ್‌ಗಳು ಹಾಗೂ ಸೇನಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. 2020,2021 ಹಾಗೂ 2024ರಲ್ಲಿ ಮೂರು ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾರೆ. ಜಸ್ಬೀರ್ ಅವರ ವಿದ್ಯುನ್ಮಾನ ಸಾಧನದಲ್ಲಿ ಹಲವು ಪಾಕಿಸ್ತಾನದ ಮೂಲದ ದೂರವಾಣಿ ಸಂಖ್ಯೆಗಳು ದೊರೆತಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಜ್ಯೋತಿ ಅವರ ಬಂಧನದ ಬಳಿಕ ಜಸ್ಬೀರ್ ಎಲ್ಲಾ ಸಂಪರ್ಕಗಳನ್ನು ಅಳಿಸಲು ಪ್ರಯತ್ನಿಸಿದ್ದರು ಎಂದು ಯಾದವ್ ಮಾಹಿತಿ ನೀಡಿದ್ದಾರೆ.
ಸದ್ಯ ಜಸ್ಬೀರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಯಾದವ್ ವಿವರಿಸಿದ್ದಾರೆ.




