ತಿರುವನಂತಪುರಂ: ರಾಜ್ಯಪಾಲರ ಸಾಂವಿಧಾನಿಕ ಅಧಿಕಾರಗಳು ಮತ್ತು ಕರ್ತವ್ಯಗಳನ್ನು ವಿವರಿಸುವ ಪಠ್ಯವನ್ನು ಶೀಘ್ರದಲ್ಲೇ ಪಠ್ಯಪುಸ್ತಕಗಳಿಗೆ ಸೇರ್ಪಡೆಗೊಳಿಸಲಾಗುವುದು ಎಂದು ಕೇರಳ ಶಿಕ್ಷಣ ಸಚಿವ ವಿ. ಸಿವನ್‌ಕುಟ್ಟಿ ಶುಕ್ರವಾರ ಘೋಷಿಸಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಯಲು ಶಾಲೆಗಳು ಮಾದರಿ ಸ್ಥಳಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಪಾಲರ ನಿವಾಸ ಹಾಗೂ ಕಚೇರಿಯಾಗಿರುವ ರಾಜಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ''ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಬಳಸುವ ಭಾರತ ಮಾತೆಯ ಚಿತ್ರವೊಂದನ್ನು'' ಪ್ರದರ್ಶಿಸಿರುವುದನ್ನು ವಿರೋಧಿಸಿ ಸಿವನ್ ಕುಟ್ಟಿ ಹೊರನಡೆದಿದ್ದರು. ಅದಾದ ಒಂದು ದಿನದ ಬಳಿಕ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಸಾಂವಿಧಾನಿಕ ತತ್ವಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ಪಠ್ಯಕ್ರಮಕ್ಕೆ ತಿದ್ದುಪಡಿ ತಲರು ಉದ್ದೇಶಿಸಲಾಗಿದೆ ಎಂಬುದಾಗಿ ಸಚಿವರು ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಮಕ್ಕಳಿಗೆ ತಿಳಿಸುವಲ್ಲಿ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದ್ದಾರೆ.
''ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸಂವಿಧಾನದಡಿ ರಾಜ್ಯಪಾಲರ ಅಧಿಕಾರಗಳೇನು ಎನ್ನುವುದನ್ನು ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟಪಡಿಸಿದೆ'' ಎಂದು ಸಿವನ್‌ಕುಟ್ಟಿ ಹೇಳಿದರು.




