ಕಾಸರಗೋಡು: ಸಂತಾನೋತ್ಪತ್ತಿಗಾಗಿ ಬರುವ ಮೀನುಗಳ ಸುಗಮ ಸಂಚಾರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೂ.8ರ ಮಧ್ಯರಾತ್ರಿಯಿಂದ ಮೀನುಗಾರಿಕೆಗೆ ನಿಷೇಧ ಹೇರಲಾಗಿದ್ದು, ಕಾಸರಗೋಡು ಜಿಲ್ಲಾದ್ಯಂತ ಮೀನುಗಾರಿಕಾ ಬೋಟುಗಳು ದಡಸೇರಿದೆ. ನಿಷೇಧ ಉಲ್ಲಂಘಿಸಿ ಮೀನುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕೇರಳಾದ್ಯಂತ ಟ್ರಾಲಿಂಗ್ ನಿಷೇಧ ಜೂನ್ 9 ರ ಮಧ್ಯರಾತ್ರಿಯಿಂದ ಪ್ರಾರಂಭಗೊಂಡು ಜುಲೈ 31ರ ವರೆಗೆ ಜಾರಿಯಲ್ಲಿರಲಿದೆ. ಈ ಕಾಲಾವಧಿಯಲ್ಲಿ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವುದು ಮೀನಿನ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ಮೂಲಕ ಮೀನು ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆಯಿದೆ. ಮೀನುಗಳ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲಾವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕಾದರೆ, ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರವೂ ಅಗತ್ಯ. ಈ ಕಲಾವಧಿಯಲ್ಲಿ ಅನಧಿಕೃತ ಮೀನುಗಾರಿಕೆ ಕಂಡುಬಂದರೆ, 2010 ರ ಒಳನಾಡು ಜಲಚರ ಸಾಕಣೆ ಮತ್ತು ಮೀನುಗಾರಿಕೆ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಮತ್ತು ದಂಡ ವಿಧಿಸಲಾಗುವುದು. ಈ ಬಗ್ಗೆ ದೂರುಗಳನ್ನು ಜಿಲ್ಲಾ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ(04672 202537)ಗೆ ತಿಳಿಸುವಂತೆ ಕಾಸರಗೋಡು ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
(ಕಾಸರಗೋಡಿನಲ್ಲಿ ದಡಸೇರಿದ ಮೀನುಗಾರಿಕಾ ದೋಣಿಗಳು.)





