ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನೆಪವೊಡ್ಡಿ ಆರು ವರ್ಷಗಳ ಕಾಲ ಜನಗಣತಿಯನ್ನು ಮುಂದೂಡಿದ್ದ ಕೇಂದ್ರ ಸರ್ಕಾರವು ಕೊನೆಗೂ ಈ ಪ್ರಕ್ರಿಯೆ ನಡೆಸಲು ಸೋಮವಾರ ಮುಂದಡಿ ಇಟ್ಟಿದೆ. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸಲು ಅಧಿಸೂಚನೆ ಹೊರಡಿಸುವ ಮೂಲಕ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
'ಭಾರತದ ಜನಗಣತಿಯನ್ನು 2027ರಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಈ ಮೂಲಕ ಘೋಷಿಸುತ್ತದೆ' ಎಂದು ಗೃಹ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜನಗಣತಿಯ ಪ್ರಕ್ರಿಯೆಗಳು 2027ರ ಮಾರ್ಚ್ 1ರೊಳಗೆ ಮುಕ್ತಾಯಗೊಳ್ಳಲಿವೆ. ದೇಶದಲ್ಲಿ ಮೊದಲ ಡಿಜಿಟಲ್ ಜನಗಣತಿಯಾಗಲಿರುವ ಈ ಪ್ರಕ್ರಿಯೆಯು ನಾಗರಿಕರಿಗೆ ಸ್ವಯಂ-ಗಣತಿಗೆ ಒಳಪಡಲು ಅವಕಾಶ ನೀಡುತ್ತದೆ.
ಅಧಿಸೂಚನೆ ಹೊರಡಿಸಿದ ಕೂಡಲೇ ಕಾಂಗ್ರೆಸ್ ಪಕ್ಷವು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಈ ಅಧಿಸೂಚನೆಯು ಹಿಂದಿನ ಪ್ರಕಟಣೆಗಳ ಪುನರಾವರ್ತನೆಯಾಗಿದೆ ಹಾಗೂ ಅಧಿಸೂಚನೆಯಲ್ಲಿ ಜಾತಿ ಗಣತಿಯ ಸೇರ್ಪಡೆಯ ಬಗ್ಗೆ ಪ್ರಸ್ತಾವವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. 'ಇದು ಯೂ-ಟರ್ನ್‌ಗಳ 'ಉಸ್ತಾದ್'ನಿಂದ ಮತ್ತೊಂದು ಯೂ-ಟರ್ನ್ ಆಗಿದೆಯೇ ಅಥವಾ ವಿವರಗಳನ್ನು ನಂತರ ಪ್ರಕಟಿಸಲಾಗುತ್ತದೆಯೇ' ಎಂದೂ ಪ್ರಶ್ನಿಸಿದೆ.
ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ಮೊದಲ ಬಾರಿಗೆ ನಡೆಸಲಾಗುವುದು ಎಂದು ಸರ್ಕಾರ ಈ ಹಿಂದೆ ಘೋಷಿಸಿತ್ತು. 'ಅಧಿಸೂಚನೆಯಲ್ಲಿ ಜಾತಿ ಗಣತಿ ಬಗ್ಗೆ ಉಲ್ಲೇಖಿಸುವ ಅಗತ್ಯ ಇಲ್ಲ. ಜನಗಣತಿಯ ಪ್ರಶ್ನಾವಳಿಯಲ್ಲಿ ಜಾತಿಯ ಕುರಿತ ಪ್ರಶ್ನೆ ಇರುತ್ತದೆ' ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜನಗಣತಿಯೊಂದಿಗೆ ಜಾತಿ ಎಣಿಕೆಯೂ ನಡೆಯಲಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
2011ರಲ್ಲಿ ಕೊನೆಯ ಬಾರಿ ಗಣತಿ ನಡೆದಿತ್ತು. ಈ ಅಧಿಸೂಚನೆಯಿಂದಾಗಿ 2021ರಲ್ಲಿ ಜನಗಣತಿ ನಡೆಸಲು ಹೊರಡಿಸಲಾಗಿದ್ದ 2019ರ ಮಾರ್ಚ್ 26ರ ಅಧಿಸೂಚನೆ ರದ್ದಾಗಿದೆ. ಕೋವಿಡ್ -19 ಸಾಂಕ್ರಾಮಿಕವು ದೇಶವನ್ನು ಆವರಿಸಿ ಲಾಕ್‌ಡೌನ್ ಹೇರಿದ್ದರಿಂದ ಜನಗಣತಿಯನ್ನು ಮುಂದೂಡಲಾಗಿತ್ತು. 2021ರ ಜನಗಣತಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಪರಿಷ್ಕರಿಸಲು ಯೋಜಿಸಲಾಗಿತ್ತು. ಆದರೆ, ಹೊಸ ಅಧಿಸೂಚನೆಯಲ್ಲಿ ಈ ಬಗ್ಗೆ ಉಲ್ಲೇಖ ಇಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಗೃಹ ಕಾರ್ಯದರ್ಶಿ, ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿ ಜನಗಣತಿಯ ಸಿದ್ಧತೆಯನ್ನು ಪರಿಶೀಲಿಸಿದ್ದರು.
ಜನಗಣತಿ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಇದು 16ನೇ ಜನಗಣತಿಯಾಗಿದ್ದು, ಸ್ವಾತಂತ್ರ್ಯ ನಂತರದ ಎಂಟನೇ ಜನಗಣತಿಯಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.




