ಮುಂಬೈ: ಅಹಮದಾಬಾದ್ ವಿಮಾನ ದುರಂತದಲ್ಲಿನ ಗಂಭೀರ ಲೋಪಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಕರ್ತವ್ಯ ಹಂಚಿಕೆ ಮತ್ತು ಸರದಿ ಪಟ್ಟಿ ಸಿದ್ಧಪಡಿಸುವುದನ್ನೂ ಒಳಗೊಂಡು ಹಿರಿಯ ಉಪಾಧ್ಯಕ್ಷ ಸಹಿತ ಮೂವರು ಅಧಿಕಾರಿಗಳನ್ನು ತಡಮಾಡದೆ ಎಲ್ಲಾ ಕರ್ತವ್ಯಗಳಿಂದ ಬಿಡುಗಡೆ ಮಾಡುವಂತೆ ಏರ್ ಇಂಡಿಯಾ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಆದೇಶಿಸಿದೆ. ಡಿಜಿಸಿಎ ಆದೇಶವನ್ನು ತಕ್ಞಣದಿಂದಲೇ ಜಾರಿಗೆ ತರಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
'ಅಂತರ್ಗತ ಕಾರ್ಯಾಚರಣೆ ನಿರ್ವಹಣಾ ಕೇಂದ್ರದ (IOCC) ಮೇಲೆ ಕಂಪನಿಯ ಮುಖ್ಯ ನಿರ್ವಹಣಾ ಅಧಿಕಾರಿಯು ಮೇಲ್ವಿಚಾರಣೆ ವಹಿಸಲಿದ್ದಾರೆ. ವಿಮಾನಗಳ ಕಾರ್ಯಾಚರಣೆಯಲ್ಲಿ ಸುರಕ್ಷತಾ ಪ್ರೊಟೊಕಾಲ್ ಮತ್ತು ಸಾಮಾನ್ಯ ಅಭ್ಯಾಸಗಳನ್ನು ನಿರಂತರವಾಗಿ ನಡೆಸಲು ಏರ್ ಇಂಡಿಯಾ ಬದ್ಧವಾಗಿದೆ' ಎಂದು ಕಂಪನಿ ಹೇಳಿದೆ.
'ಏರ್ ಇಂಡಿಯಾದ ವಿಮಾನ ಮತ್ತು ವಿಮಾನ ಸಿಬ್ಬಂದಿ ನಿರ್ವಹಣಾ ವ್ಯವಸ್ಥೆಯ ಕುರಿತು ಇತ್ತೀಚೆಗೆ ನಡೆಸಿದ ಪರಿಶೀಲನೆ ಸಂದರ್ಭದಲ್ಲಿ ಗಂಭೀರ ಸ್ವರೂಪದ ಉಲ್ಲಂಘನೆಗಳು ಕಂಡುಬಂದಿವೆ. ಇದರಲ್ಲಿ ಪರವಾನಗಿಯಲ್ಲಿ ಲೋಪ, ಸಿಬ್ಬಂದಿಯ ವಿಶ್ರಾಂತಿ ಮತ್ತಿತರ ಸೌಲಭ್ಯಗಳು ಸಮರ್ಪಕವಾಗಿಲ್ಲ ಎಂದು ವರದಿಯಾಗಿದೆ. ಇಂಥ ಲೋಪಗಳು ಪುನರಾವರ್ತನೆಯಾಗುತ್ತಿದೆ' ಎಂದು ಡಿಜಿಸಿಎ ತನ್ನ ಆದೇಶದಲ್ಲಿ ಹೇಳಿತ್ತು.
'ವಿಮಾನ ಸಿಬ್ಬಂದಿಯನ್ನು ನಿಯೋಜಿಸುವಲ್ಲಿ ಪದೇ ಪದೇ ವ್ಯವಸ್ಥಿತ ಲೋಪಗಳು ಆಗುತ್ತಿವೆ. ದೂರುಗಳ ನಿರ್ವಹಣೆ ಮತ್ತು ಆಂತರಿಕ ಲೆಕ್ಕಾಚಾರಗಳಲ್ಲೂ ಲೋಪಗಳಾಗಿವೆ. ಇವುಗಳು ಪುನರಾವರ್ತನೆಯಾದಲ್ಲಿ ಪರವಾನಗಿ ರದ್ದು ಮತ್ತು ಕಾರ್ಯಾಚರಣೆಗೆ ನಿರ್ಬಂಧ ಹೇರಲಾಗುವುದು' ಎಂದು ಡಿಜಿಸಿಎ ಎಚ್ಚರಿಸಿತ್ತು.
ಏರ್ ಇಂಡಿಯಾಗೆ ಸೇರಿದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಜೂನ್ 12ರಂದು ಅಹಮದಾಬಾದ್‌ನ ವೈದ್ಯಕೀಯ ಕಾಲೇಜಿನ ವಸತಿಗೃಹಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ವಿಮಾನದೊಳಗಿದ್ದ ಸಿಬ್ಬಂದಿ ಸಹಿತ 241 ಪ್ರಯಾಣಿಕರನ್ನೂ ಒಳಗೊಂಡು 270ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ವಿಮಾನದಲ್ಲಿದ್ದ ಒಬ್ಬರು ಬದುಕುಳಿದಿದ್ದಾರೆ.




