ಅಹಮ್ಮದಾಬಾದ್: ಜೂನ್ 12ರಂದು ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್‌ಇಂಡಿಯಾ ದುರಂತದಲ್ಲಿ ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಮಂದಿ ಸಾವನ್ನಪ್ಪಿದ್ದರು.
ಈ ದುರಂತದಲ್ಲಿ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದರು. ಹೌದು, ಸೀಟ್ ನಂ 11ಎನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ವಿಶ್ವಾಸ್‌ಕುಮಾರ್ ರಮೇಶ್ ಮಾತ್ರ ಬದುಕಿ ಬಂದಿದ್ದರು.
ಈ ಓರ್ವ ಪ್ರಯಾಣಿಕ ಮಾತ್ರ ಅಚ್ಚರಿಯೆಂಬಂತೆ ಬದುಕುಳಿದದ್ದು ಸಾಕಷ್ಟು ವೈರಲ್ ಆಗಿತ್ತು. ಆದರೆ ಇದೀಗ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ ಒಂದು ವೈರಲ್ ಆಗಿದ್ದು, ವಿಶ್ವಾಸ್‌ಕುಮಾರ್ ರಮೇಶ್ ಏರ್‌ಇಂಡಿಯಾ ದುರಂತದಲ್ಲಿ ಬದುಕುಳಿದದ್ದು ಕಟ್ಟುಕಥೆ, ಅಸಲಿಗೆ ಆತ ವಿಮಾನದಲ್ಲಿ ಪ್ರಯಾಣಿಸಿಯೇ ಇಲ್ಲ ಎಂಬ ರೀಲ್ ಒಂದು ವೈರಲ್ ಆಗಿದೆ.
ಈ ರೀಲ್‌ನಲ್ಲಿ ವಿಶ್ವಾಸ್‌ಕುಮಾರ್ ರಮೇಶ್ ಸುಳ್ಳು ಹೇಳಿದ್ದಕ್ಕೆ ಆತನ ಮನೆಗೆ ತೆರಳಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಈತ ಹೇಳಿದ್ದೆಲ್ಲ ಕಟ್ಟುಕಥೆ, ಈತನ ಹೆಸರು ಪ್ಯಾಸೆಂಜರ್ ಲಿಸ್ಟ್‌ನಲ್ಲೂ ಪತ್ತೆಯಾಗಿಲ್ಲ ಹಾಗೂ ಆಸ್ಪತ್ರೆಯಲ್ಲಿ ದಾಖಲಾದ ಯಾವುದೇ ದಾಖಲೆಗಳಿಲ್ಲ ಎಂದಿದ್ದಾರೆ.
ಸತ್ಯಾಂಶವೇನೆಂದರೆ ವಿಶ್ವಾಸ್‌ಕುಮಾರ್ ರಮೇಶ್ ಪ್ರಯಾಣ ಮಾಡಿದ್ದು ನಿಜ ಹಾಗೂ ಅಪಘಾತಕ್ಕೀಡಾಗಿ ಬದುಕುಳಿದದ್ದೂ ನಿಜ. ಆತನ ಫ್ಲೈಟ್ ಟಿಕೆಟ್ ಸಹ ಲಭ್ಯವಾಗಿತ್ತು. ಇನ್ನು ಆಸ್ಪತ್ರೆಯಲ್ಲಿ ದಾಖಲಾಗಿದ್ದನ್ನು ಸ್ವತಃ ಪ್ರಧಾನಮಂತ್ರಿ ಮೋದಿಯೇ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಎಲ್ಲದಕ್ಕಿಂತ ವಿಶ್ವಾಸ್‌ಕುಮಾರ್ ಜೊತೆ ಅದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಆತನ ಸಹೋದರ ಮೃತಪಟ್ಟಿದ್ದರು. ಇಷ್ಟೆಲ್ಲ ನೋವಿನಲ್ಲಿರುವ ವ್ಯಕ್ತಿಗೆ ಇಂತಹ ಸುಳ್ಳು ರೀಲ್‌ಗಳನ್ನು ಮಾಡಿ ಅವಮಾನಿಸಿ ರೀಚ್ ಪಡೆದುಕೊಳ್ಳುವ ಅತೃಪ್ತ ಆತ್ಮಗಳು ತುಸು ಮಾನವೀಯತೆ ಕಲಿಯೇಬೇಕಿದೆ.




