ಜೆರುಸಲೇಂ/ಟೆಹ್ರಾನ್: ಇರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್ ದಾಳಿಯನ್ನು ಇರಾನ್ ಖಚಿತಪಡಿಸಿದ್ದು, ಉದ್ನಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಟೆಹ್ರಾನ್‌ನಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಸಾವು-ನೋವಿನ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಟೆಹ್ರಾನ್ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಬೆನ್ನಲ್ಲೇ ಇರಾನ್‌ನಿಂದ ಪ್ರತಿ ದಾಳಿ ನಿರೀಕ್ಷೆ ಮಾಡುತ್ತಿರುವ ಇಸ್ರೇಲ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಅಣ್ವಸ್ತ್ರ ಹಾಗೂ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಕೇವಲ 5 ದಿನಗಳಲ್ಲಿ ಪರಮಾಣು ಬಾಂಬ್ ತಯಾರಿಕೆ ಮಾಡುವ ಸಾಮಗ್ರಿ ಇರಾನ್ ಬಳಿ ಇದೆ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ತ ಇಸ್ರೇಲ್‌ನಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರತಿದಾಳಿಗೆ ವಾಯು ರಕ್ಷಣಾ ವ್ಯವಸ್ಥೆ ಪೂರ್ಣ ಸಿದ್ಧವಾಗಿದೆ ಎಂದು ಇರಾನ್‌ನ ಸರ್ಕಾರಿ ಟಿ.ವಿ ತಿಳಿಸಿದೆ.
ತೈಲ ಬೆಲೆ ಏರಿಕೆ, ಜಾಗತಿಕ ಷೇರುಪೇಟೆ ಕುಸಿತ...
ಇಸ್ರೇಲ್ ಹಾಗೂ ಇರಾನ್ ಸಂಘರ್ಷದಿಂದಾಗಿ ಅನಿಶ್ಚಿತತೆ ಮುಂದುವರಿದಿದೆ. ದಾಳಿ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಕಂಡಿದ್ದು, ಜಾಗತಿಕ ಷೇರುಪೇಟೆಯಲ್ಲಿ ಭಾರಿ ಪತನ ದಾಖಲಾಗಿದೆ.
ಕಾರ್ಯಾಚರಣೆ ಮುಂದುವರಿಯಲಿದೆ: ಇಸ್ರೇಲ್ ಪ್ರಧಾನಿ
'ಇರಾನ್‌ನ ಅಣ್ವಸ್ತ್ರ ಹಾಗೂ ಮಿಲಿಟರಿ ಭೀತಿಯನ್ನು ನಿರ್ಮೂಲನೆ ಮಾಡುವವರೆಗೂ ಈ ಕಾರ್ಯಾಚರಣೆಯು ಮುಂದುವರಿಯಲಿದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
ಅಲ್ಲದೆ ಇಸ್ರೇಲ್ ನಡೆಸಿರುವ ಕಾರ್ಯಾಚರಣೆಯನ್ನು 'ರೈಸಿಂಗ್ ಲಯನ್' ಎಂದು ಸಂಬೋಧಿಸಿದ್ದಾರೆ.
'ನಾವು ಇರಾನ್ ಅಣ್ವಸ್ತ್ರ ಯೋಜನೆಯ ಮೇಲೆ ದಾಳಿ ನಡೆಸಿದ್ದೇವೆ. ಇರಾನ್‌ನ ಗುರಿ ನಿರ್ದೇಶಿತ ಕ್ಷಿಪಣಿ ಯೋಜನೆಯ ಮೇಲೆಯೂ ದಾಳಿ ನಡೆಸಲಾಗಿದೆ' ಎಂದು ಹೇಳಿದ್ದಾರೆ.
ಇಸ್ರೇಲ್ ದಾಳಿಯಲ್ಲಿ ಇರಾನ್ ಸೇನಾಪಡೆಗಳ ಮುಖ್ಯಸ್ಥನ ಹತ್ಯೆ: ವರದಿ:
ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥನ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಇಸ್ರೇಲ್ ಸೇನೆ ತಿಳಿಸಿದ್ದು, ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದೆ.
ಇರಾನ್ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳು ಹತರಾಗಿರುವ ಸಾಧ್ಯತೆಯಿದೆ ಎಂದೂ ಸಹ ಇಸ್ರೇಲ್ ಸೇನೆ ಹೇಳಿದೆ.
ಇರಾನ್ ಅಣ್ವಸ್ತ್ರ ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಟೆಹ್ರಾನ್ ಮೇಲಿನ ದಾಳಿಯನ್ನು ಇರಾನ್ ಖಚಿತಪಡಿಸಿದೆ.
ಇದರಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.
ಮಗದೊಂದು ಮೂಲದ ಪ್ರಕಾರ, ದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹೊಸೈನ್ ಸಲಾಮಿ ಹತ್ಯೆಗೀಡಾಗಿದ್ದಾನೆ ಎಂದು ವರದಿಯಾಗಿದೆ.
ಭಾರತೀಯರಿಗೆ ಎಚ್ಚರಿಕೆ...
ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಹಾಗೂ ಇರಾಕ್‌ನಲ್ಲಿ ಇರುವ ತನ್ನ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆಯನ್ನು ನೀಡಿದೆ.
ಇರಾನ್ ಹಾಗೂ ಇರಾಕ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಈ ಸಂಬಂಧ ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು, ಭಾರತೀಯ ಪ್ರಜೆಗಳು ಜಾಗರೂಕರಾಗಿ ಇರಬೇಕು. ಅನಗತ್ಯವಾಗಿ ಹೊರಗಡೆ ಹೋಗಬಾರದು. ಸದಾ ಭಾರತೀಯ ರಾಯಭಾರ ಕಚೇರಿಯ ಜೊತೆ ಸಂಪರ್ಕದಲ್ಲಿರುವಂತೆಯೂ ತಿಳಿಸಿದೆ.




