ಮಾಸ್ಕೊ: ಅಮೆರಿಕವು ಇರಾನ್‌ನಲ್ಲಿ ಅಣ್ವಸ್ತ್ರಗಳನ್ನು ಬಳಸುವುದು ಮಹಾದುರಂತಕ್ಕೆ ಎಡೆಮಾಡಿಕೊಡಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಎಚ್ಚರಿಸಿರುವುದಾಗಿ ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ TASS ವರದಿ ಮಾಡಿದೆ.
ಪರಮಾಣು ಶಸ್ತ್ರಾಸ್ತ್ರ ಬಳಕೆ ಸಾಧ್ಯತೆ ಇದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದಿರುವ ಪೆಸ್ಕೋವ್, ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಯಾವ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಅವರು ಉಲ್ಲೇಖಿಸಿಲ್ಲ.
ಇರಾನ್‌ನ ಫೋರ್ಡೊದಲ್ಲಿರುವ ಯುರೇನಿಯಮ್ ಪುಷ್ಟೀಕರಣ ಘಟಕವನ್ನು ಸಂಪೂರ್ಣ ನಾಶ ಮಾಡಲು, ಸಾಧಾರಣ ಬಾಂಬ್‌ಗಳಿಂದ ಸಾಧ್ಯವಿಲ್ಲ. ಅದಕ್ಕಾಗಿ ಪರಮಾಣ ಶಸ್ತ್ರಾಸ್ತ್ರ ಬಳಸುವ ಅಗತ್ಯವಿದೆ ಎಂಬುದಾಗಿ ಅಮೆರಿಕ ಭದ್ರತಾ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದಾಗ್ಯೂ ಡೊನಾಲ್ಡ್ ಟ್ರಂಪ್ ಅವರು ಪರಮಾಣು ಶಸ್ತ್ರಾಸ್ತ್ರ ಬಳಸುವ ಕುರಿತು ಯೋಚಿಸಿಲ್ಲ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಹಾಗೂ ಜನರಲ್ ಡ್ಯಾನ್ ಕೇನ್ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಸಭೆಗಳಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಗಾರ್ಡಿಯನ್ ಪತ್ರಿಕೆಯಲ್ಲಿ ವರದಿಯಾಗಿದೆ.
ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವ ಬಗ್ಗೆ ಎರಡು ವಾರಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟ್ರಂಪ್ ಗುರುವಾರ ಹೇಳಿದ್ದರು.
ಇರಾನ್ ಜೊತೆ ನಿಕಟ ಸಂಬಂಧ ಹೊಂದಿರುವ ರಷ್ಯಾ, ಸಂಘರ್ಷದಲ್ಲಿ ತೊಡಗಿರುವ ಇಸ್ರೇಲ್ ಪರವಾಗಿ ಅಮೆರಿಕವು ಶಸ್ತ್ರಾಸ್ತ್ರ ನೆರವಿನ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಎಚ್ಚರಿಸಿದೆ.




