ಟೆಹರಾನ್: ಇಸ್ರೇಲ್ ನಡೆಸಿರುವ ದಾಳಿ ವೇಳೆ ಬುಶೆಹ್ರ್ ಅಣು ಸ್ಥಾವರಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಇರಾನ್ ಹೇಳಿಕೊಂಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್, 'ಇರಾನ್ ಮಾನಸಿಕ ಯುದ್ಧದಲ್ಲಿ ತೊಡಗಿದೆ' ಎಂದು ಹೇಳಿದೆ.
ಇರಾನ್‌ನ ಬಂದರು ನಗರಿ ಬುಶೆಹ್ರ್‌ನಲ್ಲಿರುವ ಅಣು ಸ್ಥಾವರದ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಗುರುವಾರ ವರದಿಯಾಗಿದೆ.
ಈ ಕುರಿತು ರಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.
ಅಣು ಸ್ಥಾವರದ ಮೇಲಿನ ದಾಳಿಯು ಚೆರ್ನೋಬಿಲ್ ರೀತಿಯ ದುರಂತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿರುವ ರಷ್ಯಾ, ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಆಗ್ರಹಿಸಿದೆ.
ಬುಶೆಹ್ರ್ ಘಟಕವು ಇರಾನ್‌ನಲ್ಲಿ ಸಕ್ರಿಯವಾಗಿರುವ ಏಕೈಕ ಅಣುಸ್ಥಾವರವಾಗಿದ್ದು, ಇದನ್ನು ರಷ್ಯಾ ನಿರ್ಮಿಸುತ್ತಿದೆ. ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಷ್ಯಾ ತಂತ್ರಜ್ಞರ ಸುರಕ್ಷತೆ ಕುರಿತು ರಷ್ಯಾ ವಿದೇಶಾಂಗ ಸಚಿವಾಲಯ ವಕ್ತಾರೆ ಮಾರಿಯಾ ಝಖರೋವಾ ಆತಂಕ ವ್ಯಕ್ತಪಡಿಸಿದ್ದಾರೆ.
ಬುಶೆಹ್ರ್ ಅಣು ಸ್ಥಾವರದ ಮೇಲಿನ ದಾಳಿ ಕುರಿತು ವರದಿಯಾಗುತ್ತಿರುವ ನಡುವೆ, ಅಮೆರಿಕವು ಇರಾನ್‌ನಲ್ಲಿ ಅಣ್ವಸ್ತ್ರ ಬಳಸಲು ಮುಂದಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ.




